ADVERTISEMENT

ರಾಜ್ಯೋತ್ಸವ ಪ್ರಶಸ್ತಿ: ವೃದ್ಧರ ವೈದ್ಯೆಗೆ ಸಂದ ಗೌರವ

ರಾಜ್ಯೋತ್ಸವ ಪ್ರಶಸ್ತಿಗೆ ಬಳ್ಳಾರಿಯ ಡಾ.ಎ.ನಾಗರತ್ನ ಆಯ್ಕೆ

ಕೆ.ನರಸಿಂಹ ಮೂರ್ತಿ
Published 28 ಅಕ್ಟೋಬರ್ 2020, 15:40 IST
Last Updated 28 ಅಕ್ಟೋಬರ್ 2020, 15:40 IST
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಎ.ನಾಗರತ್ನ ಅವರು ತಮ್ಮ ವೃದ್ಧಾಶ್ರಮದ ವೃದ್ಧೆಯೊಂದಿಗೆ
ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಡಾ.ಎ.ನಾಗರತ್ನ ಅವರು ತಮ್ಮ ವೃದ್ಧಾಶ್ರಮದ ವೃದ್ಧೆಯೊಂದಿಗೆ   

ಬಳ್ಳಾರಿ: ಎರಡು ದಶಕಕ್ಕೂ ಹೆಚ್ಚು ಕಾಲದಿಂದ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಆರೋಗ್ಯ ಕಾಳಜಿ ವಹಿಸುತ್ತಿರುವ ಡಾ.ಎ.ನಾಗರತ್ನ ಅವರು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ವಯಸ್ಸು ಮತ್ತು ಧೀರ್ಘಕಾಲದ ಕಾಯಿಲೆಗಳು ಹಿರಿಯ ನಾಗರಿಕರ ಮೇಲೆ ಬೀರುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಪರಿಣಾಮಗಳ ಕುರಿತು ವಿಶೇಷ ಆಸಕ್ತಿಯಿಂದ ಅಧ್ಯಯನ ನಡೆಸಿರುವ ಅವರು, ತಮ್ಮ ತಂದೆ ಸುಬ್ರಹ್ಮಣ್ಯಂ ಅವರ ನೆನಪಿನಲ್ಲೇ ಹಿರಿಯ ನಾಗರಿಕರಿಗಾಗಿ ಸಂಗನಕಲ್ಲು ಗ್ರಾಮದಲ್ಲ 4 ಎಕರೆ ಜಮೀನಿನಲ್ಲಿ ‘ಕೃಷ್ಣ ಸನ್ನಿಧಿ’ ವೃದ್ಧಾಶ್ರಮವನ್ನು ನಡೆಸುತ್ತಿದ್ದಾರೆ.

ಉಚಿತ ಮತ್ತು ಶುಲ್ಕ ಸಹಿತ ವಿಭಾಗಗಲ್ಲಿ ಸದ್ಯ ಬಳ್ಳಾರಿ, ಆಂಧ್ರ, ಬೆಂಗಳೂರು , ಹೈದರಾಬಾದ್ ಸೇರಿದಂತೆ ವಿವಿಧೆಡೆಯ 80 ವೃದ್ಧರ ಆರೈಕೆ ನಡೆದಿದೆ. ಎರಡು ದಶಕಕ್ಕೂ ಹೆಚ್ಚಿನ ಕಾಲದಿಂದ ಸಲ್ಲಿಸುತ್ತಿರುವ ಈ ಸೇವೆಯೇ ಅವರನ್ನು ಪ್ರಶಸ್ತಿಯತ್ತ ಕೊಂಡೊಯ್ದಿದೆ.

ADVERTISEMENT

ಬಳ್ಳಾರಿ ಮೆಡಿಕಲ್‌ ಕಾಲೇಜಿನಿಂದ ಎಂಬಿಬಿಎಸ್‌ ಪದವಿ ಪಡೆದ ಅವರು, ಮೆಡಿಕೋ ಲೀಗಲ್‌ ಸೈನ್ಸ್‌ ಕುರಿತು ಪುಣೆಯ ಸಿಂಬಯೋಸ್‌ನಿಂದ ಹಾಗೂ ಜೀರಿಯಾಟ್ರಿಕ್‌ ಮೆಡಿಸಿನ್ ಕುರಿತು ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ ಪೋಸ್ಟ್‌ ಗ್ರಾಜುಯೇಟ್‌ ಡಿಪ್ಲೊಮಾ ಪಡೆದಿದ್ದಾರೆ.

ಅವರದ್ದು ವೈದ್ಯರ ಕುಟುಂಬ. ಪತಿ ವಿಮ್ಸ್‌ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ವೈದ್ಯ ಡಾ ಸುಯಜ್ಞ ಜೋಶಿ. ಇಬ್ಬರು ಪುತ್ರರು, ಪುತ್ರಿ ಮತ್ತು ಸೊಸೆಯಂದಿರು ಕೂಡ ವೈದ್ಯರು.

ಸದ್ಯ ನಗರದ ವಡ್ಡರಬಂಡೆ ಪ್ರದೇಶದಲ್ಲಿ ಗೀತಾ ನರ್ಸಿಂಗ್‌ ಹೋಂ ಮತ್ತು ಗೀತಾ ಡಿಸ್ಪೆನ್ಸರಿ ನಡೆಸುತ್ತಿರುವ ಅವರು ಅದರಿಂದ ಬರುವ ಆದಾಯವೆಲ್ಲವನ್ನೂ ವೃದ್ಧಾಶ್ರಮಕ್ಕೆ ಮೀಸಲಿಟ್ಟಿದ್ದಾರೆ. ದಿನವೂ ನಾಲ್ಕೈದು ಬಾರಿ ವೃದ್ಧಾಶ್ರಮಕ್ಕೆ ಭೇಟಿ ನೀಡುತ್ತಾರೆ.

‘ಹಿರಿಯ ನಾಗರಿಕರ ಸೇವೆಗಾಗಿ ನೀಡುವ ಉತ್ತಮ ಸಂಸ್ಥೆಯ ಪ್ರಶಸ್ತಿಯನ್ನು ಕೆಲವು ವರ್ಷಗಳ ಹಿಂದೆ ಸರ್ಕಾರ ನಮ್ಮ ವೃದ್ಧಾಶ್ರಮಕ್ಕೆ ನೀಡಿತ್ತು. ಇದೀಗ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರಲಿಲ್ಲ. ಯಾರಾದರೂ ಹಿತೈಷಿಗಳು ನನ್ನ ಹೆಸರನ್ನು ಶಿಫಾರಸು ಮಾಡಿರಬಹುದು’ ಎಂದು ಅವರು ‘‍ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಶಸ್ತಿಗಾಗಿ ವೃದ್ಧರ ಸೇವೆಯನ್ನು ಯಾವತ್ತೂ ಮಾಡಲಿಲ್ಲ. ವೃದ್ಧಾಶ್ರಮ ಸ್ಥಾಪಿಸುವ ಸಲುವಾಗಿಯೇ, ಕೊಯಮತ್ತೂರಿನ ವೃದ್ಧಶ್ರಮವೊಂದರಲ್ಲಿ ಒಂದು ವಾರ ವಾಸವಿದ್ದು, ಸ್ವತಃ ಅರಿತುಕೊಂಡೆ. ಜಿಲ್ಲೆಯಲ್ಲಿ ಮತ್ತೆ ವೃದ್ಧಾಶ್ರಮದ ಅಗತ್ಯದ ಕುರಿತು ಸಮೀಕ್ಷೆ ನಡೆಸಿದ ಬಳಿಕವೇ ಶುರು ಮಾಡಿದೆ’ ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.