
ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಹೊಳೆ ಮುತ್ಕೂರು ಗ್ರಾಮದ ತುಂಗಭದ್ರಾ ಆಣೆಕಟ್ಟೆ ನಿರ್ಮಾಣದ ಯೋಜನೆಯ ನಿರಾಶ್ರಿತರ ಪುನರ್ವಸತಿ ಪಡೆದ ಫಲಾನುಭವಿಗಳ ನಿವೇಶನಗಳನ್ನು ಒತ್ತುವರಿ ಮಾಡಲಾಗಿದ್ದು, ಕೂಡಲೇ ತೆರವುಗೊಳಿಸಬೇಕೆಂದು ಗ್ರಾಮಸ್ಥರು ತಹಶೀಲ್ದಾರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಪುನರ್ವಸತಿ ನಿರಾಶ್ರಿತರ ಹೋರಾಟ ಸಮಿತಿಯ ಅಧ್ಯಕ್ಷ ಪ್ರೊ.ಬಿ.ಲೋಕೇಶ್ ಮಾತನಾಡಿ, ಆಣೆಕಟ್ಟೆ ನಿರ್ಮಾಣದ 1951-52ರಲ್ಲಿ ಗ್ರಾಮದ ಜಮೀನುಗಳು, ವಸತಿ ಸೇರಿದಂತೆ ಬೆಲೆಬಾಳುವ ಆಸ್ತಿಗಳನ್ನು ಕಳೆದುಕೊಂಡು ನಿರಾಶ್ರಿತರಾದ ಸಂದರ್ಭದಲ್ಲಿ ಸರ್ಕಾರ ಹೂವಿನ ಹಡಗಲಿ ತಾಲ್ಲೂಕಿನ ಹಿಂದಿನ ಮಲ್ಲಾಪುರ ತಹಶೀಲ್ದಾರ್ ಮೂಲಕ ಮುತ್ಕೂರು ಗ್ರಾಮದ 41 ಕುಟುಂಬಗಳಿಗೆ ಎಂ.ಬಿ.ಕಾಲೊನಿ ಬಳಿ ಸರ್ವೆ.ನಂ.12ಬಿ ಯಲ್ಲಿ ತಲಾ 100×45 ಅಳತೆಯ ನಿವೇಶನ ನೀಡಿದ್ದರು. ಈ ಪೈಕಿ ಕೆಲ ಕುಟುಂಬಗಳು ಅಲ್ಲೇ ವಾಸವಾಗಿವೆ. ಇನ್ನೂ ಕೆಲವು ಕುಟುಂಬಗಳು ಆರ್ಥಿಕ ತೊಂದರೆ ಹಾಗೂ ವೈಯಕ್ತಿಕ ಕಾರಣಗಳಿಂದ ಮನೆ ನಿರ್ಮಿಸಿಕೊಳ್ಳಲಾಗದೇ ಖಾಲಿ ನಿವೇಶನ ಬಿಟ್ಟಿದ್ದರು. ಆ ನಿವೇಶನಗಳನ್ನು ಈಗ ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಹೋರಾಟ ಸಮಿತಿಯ ಉಪಾಧ್ಯಕ್ಷ ಎಚ್.ಅನಂತಕುಮಾರ ಮಾತನಾಡಿ, ನಿರಾಶ್ರಿತರ ಮೂಲ ನಿವೇಶನ ಪಕ್ಕದಲ್ಲೇ ಮಿನಿ ವಿಧಾನಸೌಧ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ನಿವೇಶನ ಬೆಲೆಗಳು ಹೆಚ್ಚಾದ ಕಾರಣ ಕೆಲವರು ಭೂ ಮಾಫಿಯಾ ಜತೆ ಸೇರಿ 2ಬಿ ಸರ್ವೇ ನಿವೇಶನದಲ್ಲಿ ಸರ್ಕಾರದ ಅನುಮತಿ ಇಲ್ಲದೆ ಅತಿಕ್ರಮಣ ಮಾಡಿಕೊಂಡು ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಆದ್ದರಿಂದ ಅವರನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.
ತುಂಗಭದ್ರಾ ಆಣೆಕಟ್ಟು ನಿರ್ಮಾಣ ಮಾಡುವ ವೇಳೆ ಭೂಮಿ ನಿವೇಶನ ತ್ಯಾಗ ಮಾಡಿದ ಕುಟುಂಬಗಳಿಗೆ ರಕ್ಷಣೆ ನೀಡಿ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮದ ಮುಖಂಡ ಎಚ್. ಕೊಟ್ರಯ್ಯ ಮಾತನಾಡಿದರು. ಮನವಿ ಸ್ವೀಕರಿಸಿದ ತಹಶೀಲ್ದಾರ್ ಅರ್.ಕವಿತಾ ಮೇಲಾಧಿಕಾರಿಗಳ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆ.ಮಾರುತೇಶ್, ಎಸ್.ಶಶಿಧರ, ಕೆ.ಕಾಳಪ್ಪ, ಎಂ.ವಿರೂಪಾಕ್ಷಯ್ಯ, ಬಿ.ಪರ್ವತಪ್ಪ, ಶರಣಪ್ಪ ಪೂಜಾರ, ಅಂಜಿನಮ್ಮ, ಸಿ.ರಂಗಪ್ಪ, ವಜ್ರಪ್ಪ, ಎಚ್.ಹನುಮವ್ವ, ಬಿ.ಜಯಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.