ಬಳ್ಳಾರಿ: ಬಳ್ಳಾರಿ ಹೊರವಲಯದ ಕೊಳಗಲ್ಲು ಬಳಿ ನಿರ್ಮಿಸಲು ಉದ್ದೇಶಿಸಿರುವ ಮೆಗಾ ಡೇರಿಗೆ ಹೆಚ್ಚುವರಿ ₹80 ಕೋಟಿ ಅನುದಾನ ಮಂಜೂರು ಮಾಡಲು ಕೆಎಂಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ರಾಬಕೊವಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್ ನೇತೃತ್ವದ ನಿಯೋಗವು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
‘ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳದ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಅವರನ್ನು ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ರಾಬಕೊವಿ) ನಿಯೋಗವು ಸೋಮವಾರ ಭೇಟಿಯಾಯಿತು.
ಕೊಪ್ಪಳದ ಬೂದಗುಂಪ ಡೇರಿಯಲ್ಲಿ ಬ್ಲಾಸ್ಟ್ ಚಿಲ್ಲಿಂಗ್ ಹಾಗೂ ಪನ್ನೀರ್ ತಯಾರಕಾ ಘಟಕ ನಿರ್ಮಾಣ ಕುರಿತು ಮಾತುಕತೆ ನಡೆಸಲಾಯಿತು. ಮೇಘಾ ಡೇರಿ ನಿರ್ಮಾಣಕ್ಕೆ ಕರ್ನಾಟಕ ಗಣಿಗಾರಿಕೆ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಈಗಾಗಲೇ ₹80 ಕೋಟಿ ಅನುದಾನ ಮೀಸಲಿಟ್ಟಿದೆ. ಇನ್ನೂ ಹೆಚ್ಚುವರಿಯಾಗಿ ₹80 ಕೋಟಿ ಅನುದಾನ ಮಂಜೂರು ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಕರ್ನಾಟಕ ಹಾಲು ಮಂಡಳಿ ವತಿಯಿಂದ ಪ್ರಸ್ತಾವನೆ ಸಲ್ಲಿಸಬೇಕು ಎಂದು ನಿಯೋಗ ಮನವಿ ಮಾಡಿತು.
ಮುಂದಿನ ಆರ್ಥಿಕ ವರ್ಷದಲ್ಲಿ ಕೊಪ್ಪಳದಲ್ಲಿ ಹಾಲು ಸಂಗ್ರಹಣಾ ಘಟಕ ಸ್ಥಾಪನೆ ಮಾಡಲು ರಾಬಕೊವಿ ಯೋಜನೆ ರೂಪಿಸಿದ್ದು, ಈ ಕುರಿತು ಚರ್ಚೆ ನಡೆದಿದೆ. ಹಾಲು ಉತ್ಪಾದಕರಿಗೆ ಪ್ರತಿ ತಿಂಗಳ ಅವಧಿಯೊಳಗೆ ಹಣ ಪಾವತಿ ಮಾಡುವಂತೆ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ ಎಂದು ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.