ಬಳ್ಳಾರಿ: 'ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1 ರಷ್ಟು ಮೀಸಲಾತಿ ನಿಗದಿಗೊಳಿಸಬೇಕು' ಎಂದು ಛಲವಾದಿ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ.ಬಸವರಾಜ್ ಆಗ್ರಹಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಮೀಸಲಾತಿ ಘೋಷಣೆ ಮಾಡಿದ್ದು, ರಾಷ್ಟ್ರೀಯ ಜನಗಣತಿ ಹಾಗೂ ಕಾಲಕಾಲಕ್ಕೆ ಮೀಸಲಾತಿ ಆಯೋಗವು ಮಾಡಬಹುದಾದ ಶಿಫಾರಸ್ಸಿನ ಹಾಗೂ ಜನಸಂಖ್ಯೆ ಆಧಾರಿತ ತಿದ್ದುಪಡಿಗೆ ಒಳಪಟ್ಟು ಒಳ ಮೀಸಲಾತಿ ನಿಗದಿ ಪಡಿಸಿದ್ದನ್ನು ಸ್ವಾಗತಿಸುತ್ತೇವೆ ಎಂದರು.
ದಲಿತರು ಹಾಗೂ ವಿಶೇಷವಾಗಿ ಬಲಗೈನ ಛಲವಾದಿ ಸಮುದಾಯಗಳು ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಮತಗಳಾಗಿದ್ದು ಪ್ರಾರಂಭದಿಂದಲೂ ಈವರೆಗೆ ನಿರಂತರವಾಗಿ
ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿ ಕೊಡುಗೆ ನೀಡಿದೆ ಎಂದು ಹೇಳಿದರು.
ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ದಲಿತ ಸಮುದಾಯಗಳನ್ನು ಜಾಗೃತಿಗೊಳಿಸಲಾಗುವುದು ಮತ್ತು ನವೆಂಬರ್, ಡಿಸೆಂಬರ್ ತಿಂಗಳಲ್ಲಿ ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ದಲಿತ ಸಮುದಾಯವನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿ, ದಲಿತ ನಾಯರಿಗೆ ಮುಖ್ಯಮಂತ್ರಿ ಸ್ಥಾನವನ್ನು ಕೊಡುವಂತೆ ಹೈಕಮಾಂಡ್‌ಗೆ ಆಗ್ರಹಿಸಲಾಗುವುದು ಎಂದರು.
ಒಂದು ವೇಳೆ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಕೊಡದಿದ್ದಲ್ಲಿ, ದಲಿತ ಸಮುದಾಯವೂ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಬುದ್ದಿ ಕಲಿಸಬೇಕಾಗುವುದು ಎಂದು ಎಚ್ಚರಿಕೆಯನ್ನು
ನೀಡಿದರು.
ಛಲವಾದಿ ಮಹಾಸಭಾದ ಪದಾಧಿಕಾರಿಗಳಾದ ಸಿ.ನರಸಪ್ಪ, ಆನಂದ್ ಕುಮಾರ್, ಶ್ರೀನಿವಾಸ್, ಶಂಕರ್, ಸೋಮನಾಥ್, ಸಿ.ನಾರಾಯಣ ಸ್ವಾಮಿ, ಓಂಕಾರಪ್ಪ, ನಿರಂಜನ್, ಸಿದ್ದಬಸಪ್ಪ, ಗೂಳಪ್ಪ, ಬಸವರಾಜ್, ಗಾದಿಲಿಂಗಪ್ಪ, ನಾಗಲಕೆರೆ ಗೋವಿಂದ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.