ಬಳ್ಳಾರಿ: ಪ್ರತಿ ಏಪ್ರಿಲ್ ಮೊದಲ ಭಾನುವಾರವನ್ನು ವಿಶ್ವದಾದ್ಯಂತ ‘ಭೂವಿಜ್ಞಾನಿ’ಗಳ ದಿನವಾಗಿ ಆಚರಿಸಲಾಗುತ್ತದೆ. ಅವರ ಸಾಧನೆ ಗೌರವಿಸುವುದು ಈ ದಿನದ ವಿಶೇಷ. ಈ ದಿನ ಇಡೀ ದಕ್ಷಿಣ ಭಾರತ, ಅದರಲ್ಲೂ ಬಳ್ಳಾರಿ ಜಿಲ್ಲೆ ಸ್ಮರಿಸಬೇಕಾದದ್ದು ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಭೂ ವಿಜ್ಞಾನಿಯಾಗಿದ್ದ ರಾಬರ್ಟ್ ಬ್ರೂಸ್‌ಫೂಟ್ ಅವರನ್ನು.
ರಾಬರ್ಟ್ ಬ್ರೂಸ್‌ಫೂಟ್ ದಕ್ಷಿಣ ಭಾರತದ ಭೂವಿಜ್ಞಾನದ ಪಿತಾಮಹಾ. ಅವರನ್ನು ಭಾರತದ ಪ್ರಾಗೈತಿಹಾಸಿಕ ಅಧ್ಯಯನದ ಪಿತಾಮಹಾ ಎಂದೂ ಕರೆಯಲಾಗುತ್ತದೆ.
1894ರಲ್ಲಿ ಮೈಸೂರು ಮಹಾರಾಜರು ಬೆಂಗಳೂರಿನಲ್ಲಿ ‘ಮೈಸೂರು ಭೂ ವಿಜ್ಞಾನ’ ಇಲಾಖೆ ಆರಂಭಿಸಿದರು. ಅದರ ಮೊದಲ ಮುಖ್ಯಸ್ಥರಾಗಿದ್ದವರು ಬ್ರೂಸ್‌ಫೂಟ್. ಈ ಇಲಾಖೆ ಇಂದು ‘ಗಣಿ ಮತ್ತು ಭೂ ವಿಜ್ಞಾನ ಇಲಾಖೆ’ಯಾಗಿ ಕಾರ್ಯನಿರ್ವಹಿಸುತ್ತಿದೆ.
1834ರ ಸೆ.22ರಂದು ಇಂಗ್ಲೆಂಡ್‌ನಲ್ಲಿ ಜನಿಸಿದ ಬ್ರೂಸ್‌ಫೂಟ್ 1858ರಲ್ಲಿ ಭಾರತೀಯ ಭೂ ವಿಜ್ಞಾನ(ಜಿಎಸ್‌ಐ) ಇಲಾಖೆಗೆ ಸೇರಿದ್ದರು. ಅವರನ್ನು ಮದ್ರಾಸ್‌ಗೆ ನಿಯೋಜಿಸಲಾಗಿತ್ತು. 1870ರಲ್ಲಿ ಕೆಲ ಕಾಲ ಬಳ್ಳಾರಿಯಲ್ಲೇ ನೆಲೆಸಿದ್ದರು. ಬಳಿಕ ಮದ್ರಾಸ್‌ಗೆ ಸ್ಥಳಾಂತರಗೊಂಡರು. 1880ರಲ್ಲಿ ಮತ್ತೆ ಬಳ್ಳಾರಿಗೆ ಮರಳಿದ ಅವರು ಭೂವಿಜ್ಞಾನ ಸಮೀಕ್ಷೆ ಮತ್ತು ಪ್ರಾಗೈತಿಹಾಸಿಕ ಅಧ್ಯಯನದಲ್ಲಿ ತೊಡಗಿದ್ದರು ಎನ್ನಲಾಗಿದೆ.
ಬಳ್ಳಾರಿ ಸೇರಿದಂತೆ ರಾಯಲಸೀಮಾ, ಕಲ್ಯಾಣ ಕರ್ನಾಟಕ ಮತ್ತು ಮದ್ರಾಸ್ ಪ್ರಾಂತ್ಯದಲ್ಲಿ ವ್ಯಾಪಕವಾದ ಭೂವಿಜ್ಞಾನ ಸಮೀಕ್ಷೆಗಳನ್ನು ಅವರು ನಡೆಸಿದ್ದರು. ಭೂವೈಜ್ಞಾನಿಕ ರಚನೆ ಗುರುತಿಸಿ, ಉತ್ಖನನ ಮಾಡಿದ್ದರು. ದಕ್ಷಿಣ ಭಾರತದ ಚಿನ್ನ ಹೊಂದಿರುವ ಶಿಲೆಗಳನ್ನು ಮೊದಲು ಪತ್ತೆ ಮಾಡಿದವರು ಇವರೇ. ಹರಪನಹಳ್ಳಿಯ ಚಿಗಟೇರಿ ‘ಗೋಲ್ಡ್–ವಾಷಿಂಗ್’ (ಮಣ್ಣಿನಿಂದ ಚಿನ್ನವನ್ನು ಪ್ರತ್ಯೇಕಗೊಳಿಸುವ ಪ್ರಕ್ರಿಯೆ)ತಾಣವಾಗಿತ್ತು ಎಂಬುದನ್ನು ತಮ್ಮ ‘ಮೆಮೊರಿಸ್ ಆಫ್ ದಿ ಜಿಯಲಾಜಿಕಲ್ ಸರ್ವೆ ಆಫ್ ಇಂಡಿಯಾದಲ್ಲಿ’ ದಾಖಲಿಸಿದ್ದಾರೆ.
ಪ್ರಾಕ್ತನಶಾಸ್ತ್ರದ ಜ್ಞಾನ ಹೊಂದಿದ್ದ ಬ್ರೂಸ್‌ಫೂಟ್, ದಕ್ಷಿಣ ಭಾರತದ ಇತಿಹಾಸಪೂರ್ವ ನೆಲೆಗಳನ್ನು ಗುರುತಿಸಿದರು. ಬಳ್ಳಾರಿಯ ಕಪ್ಪಗಲ್ಲು, ಸಂಗನಕಲ್ಲು ಗುಡ್ಡಗಳಲ್ಲಿ ಆದಿ ಮಾನವರ ಹೆಜ್ಜೆಗುರುತು ಪತ್ತೆ, ಕುಡುತಿನಿಯ ಬೂದಿ ದಿಬ್ಬಗಳನ್ನು ಗುರುತಿಸಿದರು. ಇಲ್ಲಿನ ಪೂರ್ವ-ಐತಿಹಾಸದ ಕಬ್ಬಿಣ ಕರಗಿಸುವ ಉದ್ಯಮದ ಕೆಲವು ಕುರುಹುಗಳನ್ನು ಕಂಡು ಹಿಡಿದಿದ್ದರು. ಈ ಮೂಲಕ ಬಳ್ಳಾರಿ ಸಾವಿರಾರು ವರ್ಷಗಳ ಹೊಂದಿದೆ ಎಂಬುದನ್ನು ಸಾಬೀತುಪಡಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ 77 ಪೂರ್ವ–ಇತಿಹಾಸ ತಾಣಗಳಿರುವುದಾಗಿ, ಅವುಗಳಲ್ಲಿ 36 ಮುಖ್ಯವಾದವು ಎಂದು ಅವರು ದಾಖಲಿಸಿದ್ದಾರೆ. ‘ನಾನು ಸಮೀಕ್ಷೆ ಮಾಡಿದ ಆದಿಮಾನವರ ನೆಲೆಗಳಲ್ಲೇ ಬಳ್ಳಾರಿ ಜಿಲ್ಲೆಯ ನೆಲೆಗಳು ಅತ್ಯಂತ ಶ್ರೀಮಂತ’ ಎಂದು ಬ್ರೂಸ್‌ಫೂಟ್ ಬಣ್ಣಿಸಿದ್ದರು. ‘ದಿ ಫೂಟ್ ಕಲೆಕ್ಷನ್ ಆಫ್ ಇಂಡಿಯನ್ ಪ್ರಿ–ಹಿಸ್ಟೋರಿಕ್ ಆ್ಯಂಡ್ ಪ್ರೊಟೊ ಹಿಸ್ಟೋರಿಕ್ ಆಕ್ಟಿವಿಟೀಸ್’ ಪುಸ್ತಕದಲ್ಲಿ ಈ ಕುರಿತ ಉಲ್ಲೇಖವಿದೆ.
ಬಳ್ಳಾರಿಯಲ್ಲಿನ ಪ್ರಾಗೈತಿಹಾಸಿಕ ತಾಣಗಳಲ್ಲಿ ಪತ್ತೆಯಾದ ಪಳೆಯುಳಿಕೆಗಳ ರಕ್ಷಣೆ, ಜಿಲ್ಲೆಯ ಪೂರ್ವ ಇತಿಹಾಸದ ಕುರಿತು ಮಾಹಿತಿ ನೀಡಲೆಂದೇ ಬಳ್ಳಾರಿ ನಗರದಲ್ಲಿ ಜಿಲ್ಲಾಡಳಿತ, ಪ್ರೊ. ರವಿ ಕೋರಿಶೆಟ್ಟರ್, ಇತಿಹಾಸಜ್ಞರು, ಆಸಕ್ತರು ಸೇರಿ ಪ್ರಾಗೈತಿಹಾಸಿಕ ಸಂಗ್ರಹಾಲಯ ಸ್ಥಾಪಿಸಿದ್ದು, ಅದಕ್ಕೆ ರಾಬರ್ಟ್ ಬ್ರೂಸ್‌ಫೂಟ್ ಹೆಸರಿಡಲಾಗಿದೆ.
ರಾಬರ್ಟ್ ಬ್ರೂಸ್‌ಫೂಟ್ ಭೂವಿಜ್ಞಾನಿಯಾಗಿದ್ದರೂ ಪ್ರಾಕ್ತನಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿದ್ದರು. ಹೀಗಾಗಿ ಎರಡಲ್ಲೂ ಸಾಧನೆ ಮಾಡಲು ಸಾಧ್ಯವಾಯಿತುಪ್ರೊ. ರವಿ ಕೋರಿಶೆಟ್ಟರ್ ಸಂಶೋಧಕ ಪ್ರಾಕ್ತನಶಾಸ್ತ್ರಜ್ಞ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.