
ಬಳ್ಳಾರಿ: ‘ಇತ್ತೀಚೆಗೆ ಕೈಗೊಂಡ ಬಳ್ಳಾರಿ ಜಿಲ್ಲೆಯ ಪ್ರವಾಸದ ವೇಳೆ ಅಹವಾಲುಗಳನ್ನು ಸ್ವೀಕರಿಸುವ ಯಾವುದೇ ಪೂರ್ವ ನಿಗದಿತ ಯೋಜನೆ ಇರಲಿಲ್ಲ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ತಮ್ಮ ಕೆಳ ಹಂತದ ಅಧಿಕಾರಿ ಮೂಲಕ ಬುಧವಾರ ಸ್ಪಷ್ಟನೆ ಕೊಡಿಸಿದ್ದಾರೆ.
ಅವರ ಪ್ರವಾಸದ ಬಗ್ಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಸಂಘಟನೆಗಳು, ಸಿಪಿಐ (ಎಂ) ಪಕ್ಷ ಮಾಡಿದ್ದ ಆಕ್ಷೇಪಕ್ಕೆ ರೋಹಿಣಿ ಸಿಂಧೂರಿ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಬಳ್ಳಾರಿಯ ಉಪ ನಿರ್ದೇಶಕಿ ದ್ವಿತೀಯ ಇ.ಸಿ ಮೂಲಕ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿಸಿದ್ದಾರೆ.
‘ರೋಹಿಣಿ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ಇತರೆ ಅಧಿಕಾರಿಗಳೊಂದಿಗೆ ಜಿಲ್ಲೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಿದ್ದು, ಕಾರ್ಯದರ್ಶಿ ಭೇಟಿ ಸಂದರ್ಭದಲ್ಲಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿಲ್ಲ ಎಂದು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಸತ್ಯಕ್ಕೆ ದೂರ. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಆಗಮಿಸುವ ಪೂರ್ವ ನಿಗದಿತ ಯೋಜನೆಗಳಿದ್ದಲ್ಲಿ ಈ ಕುರಿತು ಮೊದಲೇ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗುತ್ತದೆ’ ಎಂದು ತಿಳಿಸಲಾಆಗಿದೆ.
ಜತೆಗೆ ಪ್ರವಾಸಕ್ಕೆ ಅನಧಿಕೃತವಾಗಿ ಸರ್ಕಾರಿ ಕಾರು ಬಳಸಿಲ್ಲ ಎಂದೂ ಅವರು ರೋಹಿಣಿ ಪರವಾಗಿ ತಿಳಿಸಿದ್ದಾರೆ. ಸಂಡೂರಿನಲ್ಲಿ ರೋಹಿಣಿ ಅವರ ಕಾರುಗಳನ್ನು ತಡೆದಿದ್ದ ಸ್ಥಳೀಯರು, ರೈತ ಮುಖಂಡರು ಯಾವುದೇ ಅಹವಾಲುಗಳನ್ನೂ ನೀಡಿರಲಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.