ADVERTISEMENT

ಎನ್‌ಎಂಡಿಸಿ ಅದಿರು ಅಕ್ರಮ ಸಾಗಣೆ ಪ್ರಕರಣ ಕಾರಣ? ರೋಹಿಣಿ ಗಣಿ ಹೊಣೆ ಬದಲು

ಬಳ್ಳಾರಿ ಪ್ರವಾಸ ವಿವಾದ, ಎನ್‌ಎಂಡಿಸಿ ಅದಿರು ಅಕ್ರಮ ಸಾಗಣೆ ಪ್ರಕರಣ ಕಾರಣ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 2:59 IST
Last Updated 4 ಮಾರ್ಚ್ 2026, 2:59 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಬಳ್ಳಾರಿ: ರೋಹಿಣಿ ಸಿಂಧೂರಿ ಅವರಿಗೆ ನೀಡಲಾಗಿದ್ದ ವಾಣಿಜ್ಯ ಮತ್ತು ಕೈಗಾರಿಕಾ‌(ಗಣಿ) ಇಲಾಖೆಯ ಕಾರ್ಯದರ್ಶಿ ಹುದ್ದೆಯನ್ನು ಸರ್ಕಾರ 2005ನೇ ಬ್ಯಾಚ್‌ನ ಐಎಎಸ್‌ ಅಧಿಕಾರಿ ವಿಪುಲ್‌ ಬನ್ಸಾಲ್‌ ಅವರಿಗೆ ಮಂಗಳವಾರ ವಹಿಸಿ ಆದೇಶ ಹೊರಡಿಸಿದೆ. 

ಗಣಿ ಇಲಾಖೆಯ ಕಾರ್ಯದರ್ಶಿ ಹುದ್ದೆಗೆ ರೋಹಿಣಿ ಅವರನ್ನು 2025ರ ಅಕ್ಟೋಬರ್‌ನಲ್ಲಿ ವರ್ಗಾಯಿಸಲಾಗಿತ್ತು. ಆರು ತಿಂಗಳಾಗುವುದರ ಒಳಗಾಗಿ ರೋಹಿಣಿ ಸಿಂಧೂರಿ ಅವರ ಹುದ್ದೆಯನ್ನು ಮತ್ತೊಬ್ಬ ಅಧಿಕಾರಿಗೆ ವಹಿಸಿರುವುದರ ಹಿಂದೆ ಹಲವು ವಿಷಯಗಳು ಕೆಲಸ ಮಾಡಿರುವ ಸಾಧ್ಯತೆಗಳಿವೆ. 

ಇಲಾಖೆಯ ಅಧಿಕಾರ ವಹಿಸಿಕೊಂಡ ಬಳಿಕ ರೋಹಿಣಿ ಸಿಂಧೂರಿ ವಿವಾದಕ್ಕೆ ಗುರಿಯಾಗಿದ್ದರು. ಕಳೆದ ಡಿಸೆಂಬರ್‌ನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಅಧಿಕೃತ ಪ್ರವಾಸ ಕೈಗೊಂಡಿದ್ದ ಅವರು, ರೈತರನ್ನು ನಿರ್ಲಕ್ಷಿಸಿದ, ಸರ್ಕಾರದ ಅತಿಥಿಗೃಹಗಳನ್ನು ಬಳಸದೇ ಖಾಸಗಿ ಉದ್ದಿಮೆ ಜಿಂದಾಲ್‌ನ ಟೌನ್‌ಶಿಪ್‌ನಲ್ಲಿ ಉಳಿದಿದ್ದರ ಬಗ್ಗೆ ಜನಸಂಗ್ರಾಮ ಪರಿಷತ್‌ ಮತ್ತು ರೈತ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಅವರ ಪ್ರವಾಸದ ಬಗ್ಗೆ ತನಿಖೆ ನಡೆಯಬೇಕು ಎಂದೂ ಸಂಘಟನೆಗಳು  ಆಗ್ರಹಿಸಿದ್ದವು.   

ADVERTISEMENT

‘ಜಿಂದಾಲ್‌ ಕಂಪನಿಯು ಕೇವಲ ಉಕ್ಕು ಉತ್ಪಾದನೆಯಲ್ಲದೇ, ಸಂಡೂರಿನಲ್ಲಿ ಗಣಿಗಾರಿಕೆಯಲ್ಲೂ ತೊಡಗಿದೆ. ಇತ್ತೀಚೆಗೆ 4 ಗಣಿಗಳನ್ನು ಹರಾಜಿನಲ್ಲಿ ಖರೀದಿ ಮಾಡಿದೆ. ಆದರೆ, ಈ ಗಣಿಗಳ ಹರಾಜಿನ ವೇಳೆ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರದ ಉನ್ನತಾಧಿಕಾರಿ ಸಮಿತಿಯು ಸುಪ್ರಿಂ ಕೋರ್ಟ್‌ಗೆ ವರದಿ ನೀಡಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿರುವ ಜಿಂದಾಲ್‌ ಕಂಪನಿ, ಸರ್ಕಾರದ ವಿವಿಧ ಇಲಾಖೆಗಳನ್ನು ಪ್ರತಿವಾದಿಯಾಗಿಸಿದೆ. ಇದರಲ್ಲಿ ಗಣಿ ಇಲಾಖೆ ಕಾರ್ಯದರ್ಶಿ ರೋಹಿಣಿ ಅವರೂ ಪ್ರತಿವಾದಿಯಾಗಿದ್ದಾರೆ. ಹೀಗಿದ್ದರೂ, ಅದೇ ಜಿಂದಾಲ್‌ನಲ್ಲಿ ಆತಿಥ್ಯ ಪಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ’ ಎಂದು ರೈತ ಸಂಘ ಆರೋಪಿಸಿತ್ತು.   

ವಿವಾದ ಗಂಭೀರ ಸ್ವರೂಪ ಪಡೆದಿರುವುದನ್ನು ಅರಿತ ಅವರು ಪತ್ರಿಕಾ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿದ್ದರಾದರೂ, ಅದಕ್ಕೆ ಕೆಳ ಹಂತದ ಅಧಿಕಾರಿಗಳನ್ನು ಬಳಸಿಕೊಂಡಿದ್ದರು. ಗಣಿ ಇಲಾಖೆಯ ಬಳ್ಳಾರಿ ಉಪ ನಿರ್ದೇಶಕಿ ದ್ವಿತೀಯಾ ಇ.ಸಿ ಅವರಿಂದ ಹೇಳಿಕೆ ಬಿಡುಗಡೆ ಮಾಡಿಸಿ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. 

ವಿಷಯವನ್ನು ಇಷ್ಟಕ್ಕೇ ಬಿಡದ ಸಂಘಟನೆಗಳು ಮಾಹಿತಿ ಹಕ್ಕುಕಾಯ್ಡೆ ಅಡಿಯಲ್ಲಿ ಪ್ರವಾಸದ ವಿವರ ಕೇಳಿದವು. ಆದರೆ, ಪತ್ರಿಕಾ ಹೇಳಿಕೆಯನ್ನೇ ಮಾಹಿತಿಯಾಗಿ ರೋಹಿಣಿ ನೀಡಿದ್ದರು!  

- ಎನ್‌ಎಂಡಿಸಿ ಭೇಟಿ ಬೆನ್ನಿಗೇ ಅದಿರು ಅಕ್ರಮ 

ಬಳ್ಳಾರಿ ಪ್ರವಾಸದ ವೇಳೆ ರೋಹಿಣಿ ಅವರು ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ದ  ಸಂಡೂರಿನ ಗಣಿಗಳಿಗೆ ಭೇಟಿ ಕೊಟ್ಟಿದ್ದರು. ಅವರು ಭೇಟಿ ನೀಡಿದ ಬೆನ್ನಿಗೇ ಎನ್‌ಎಂಡಿಸಿಯಲ್ಲಿ ಅದಿರು ಅಕ್ರಮ ಸಾಗಣೆಯ ಪ್ರಕರಣ ಬೆಳಕಿಗೆ ಬಂದಿತು. ತನಿಖೆ ತೀವ್ರಗೊಳಿಸಿದ ಪೊಲೀಸರು ಎರಡೂವರೆ ಸಾವಿರ ಟನ್‌ಗಳ ಅಕ್ರಮ ಅದಿರನ್ನೂ ವಶಪಡಿಸಿಕೊಂಡರು. ಈ ವಿಚಾರ ರಾಜ್ಯದಾದ್ಯಂತ ಸದ್ದು ಮಾಡಿತ್ತು.  ಎನ್‌ಎಂಡಿಸಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಬಳ್ಳಾರಿ ಸಂಸದ ಇ. ತುಕಾರಾಂ ಅವರು ಇದಕ್ಕೂ ಮೊದಲೇ ಸರ್ಕಾರಕ್ಕೆ ಪತ್ರ ಬರೆದು ಗಮನಸೆಳೆದಿದ್ದರು. ಈ ಎಲ್ಲದರ ಹಿನ್ನೆಲೆಯಲ್ಲಿ ರೋಹಿಣಿ ಅವರ ಹುದ್ದೆಗೆ ಸರ್ಕಾರ ಮತ್ತೊಬ್ಬರನ್ನು ನೇಮಿಸಿದೆ ಎಂದು ಹೇಳಲಾಗುತ್ತಿದೆ.  ಹೊಸದಾಗಿ ನೇಮಕಗೊಂಡಿರುವ ಅಧಿಕಾರಿಯಾದರೂ ಇಲ್ಲಿನ ಗಣಿಗಳ ವ್ಯವಸ್ಥೆಯನ್ನು ಪರಿಶೀಲಿಸಬೇಕು. ಗಣಿ ಚಟುವಟಿಕೆಗಳಿಂದ ಆಗುತ್ತಿರುವ ಸಮಸ್ಯೆಗಳನ್ನೂ ಗಮನಿಸಬೇಕು ಎಂದು ಜನಸಂಗ್ರಾಮ ಪರಿಷತ್‌ನ ಮುಖಂಡ ಶ್ರೀಶೈಲ ಆಲದಹಳ್ಳಿ ಆಗ್ರಹಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.