ADVERTISEMENT

ಬಳ್ಳಾರಿ | ಸದೃಢ ರಾಷ್ಟ್ರಕ್ಕೆ ವಿದ್ಯಾರ್ಥಿಗಳ ಪಾತ್ರ ಮುಖ್ಯ: ಡಿಸಿ ಪ್ರಶಾಂತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2025, 12:39 IST
Last Updated 6 ಫೆಬ್ರುವರಿ 2025, 12:39 IST
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮುಂಜಾನೆಯ ಹಾಗೂ ಮುಸ್ಸಂಜೆಯ ಮಾತು ಮತ್ತು ಮಂಥನ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಮಾತನಾಡಿದರು
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮುಂಜಾನೆಯ ಹಾಗೂ ಮುಸ್ಸಂಜೆಯ ಮಾತು ಮತ್ತು ಮಂಥನ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪ್ರಶಾಂತ್‌ ಕುಮಾರ್‌ ಮಿಶ್ರಾ ಮಾತನಾಡಿದರು    

ಬಳ್ಳಾರಿ: ಸದೃಢ ರಾಷ್ಟ್ರ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್ ಮಿಶ್ರಾ ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ‘ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿ ಮುಂಜಾನೆಯ ಹಾಗೂ ಮುಸ್ಸಂಜೆಯ ಮಾತು ಮತ್ತು ಮಂಥನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಭವಿಷ್ಯ ರೂಪಿಸಿಕೊಳ್ಳುವ ಶಕ್ತಿ ವಿದ್ಯಾರ್ಥಿಗಳ ಕೈಯಲ್ಲಿದೆ. ಸತತ ಪ್ರಯತ್ನ ಮತ್ತು ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಯಶಸ್ಸು ಕಾಣಬಹುದು. ಉನ್ನತ ಸ್ಥಾನಮಾನದ ಉದ್ಯೋಗದ ಕನಸು ಹೊಂದಿರುವವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಮುಖ್ಯ. ಲೋಕಸೇವಾ ಆಯೋಗದಂಥ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮೂರು ಹಂತಗಳು ಇರುತ್ತವೆ. ವಿದ್ಯಾರ್ಥಿಗಳು ಕೌಶಲದೊಂದಿಗೆ ಯಶಸ್ಸು ಕಾಣಬಹುದು’ ಎಂದು ಹೇಳಿದರು.

ಕುಲಪತಿ ಪ್ರೊ. ಎಂ ಮುನಿರಾಜು ಮಾತನಾಡಿ, ‘ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಮಯ ನಿರ್ವಹಣೆಯನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಅಭಿವೃದ್ದಿಪಡಿಸುವುದು ನಮ್ಮ ಗುರಿ. ಸ್ಪರ್ಧಾತ್ಮಕ ಪರೀಕ್ಷೆಗೆ ಪಠ್ಯಕ್ರಮ ಅಧ್ಯಯನದ ಜೊತೆಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಅಭಿಪ್ರಾಯಪಟ್ಟರು. ಪದವಿ ಹಂತದಲ್ಲಿ ಅನೇಕ ಹೊಸ ಕೋರ್ಸ್ಗಳನ್ನು ಆರಂಭಿಸಲು ವಿಶ್ವವಿದ್ಯಾಲಯವು ಮುನ್ನುಡಿ ಬರೆದಿದೆ ಎಂದು ತಿಳಿಸಿದರು.

ADVERTISEMENT

ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಪ್ರಶ್ನೋತ್ತರ ನಡೆಸಿದರು. ಕುಲಸಚಿವ ರುದ್ರೇಶ ಎಸ್.ಎನ್,  ಜಿಲ್ಲಾ ಕೌಶಲ ಅಭಿವೃದ್ಧಿ ಅಧಿಕಾರಿ ಪ್ರಾಣೇಶ್ ಎಸ್., ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಸೋಮಶೇಖರ್ ವೇದಿಕೆಯಲ್ಲಿದ್ದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.