ADVERTISEMENT

ಬಳ್ಳಾರಿ: ₹2.20 ಲಕ್ಷ ಆನ್‌ಲೈನ್‌ ವಂಚನೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2024, 16:21 IST
Last Updated 3 ಮಾರ್ಚ್ 2024, 16:21 IST
ವಂಚನೆ
ವಂಚನೆ   

ಬಳ್ಳಾರಿ: ಸುಲಭ ಮಾರ್ಗದಲ್ಲಿ ಹಣ ಗಳಿಸುವ ಆಸೆ, ವರ್ಕ್‌ಫ್ರಂ ಹೋಂ ಆಮಿಷಕ್ಕೆ ಮರುಳಾದ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ₹2.20 ಲಕ್ಷ ಹಣ ಕಳೆದುಕೊಂಡಿದ್ದಾರೆ.

ಈ ಕುರಿತು ಬಳ್ಳಾರಿಯ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ಮಹಿಳೆ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. 

ಬಳ್ಳಾರಿಯ ಕೌಲ್ ಬಜಾರ್‌ನ ನಿವಾಸಿಯಾದ ಮಹಿಳೆ, ಇಂಡಿಯನ್ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ನಂಬರ್ ಮತ್ತು ಫೋನ್‌ ಪೇ ಲಿಂಕ್‌ ಮಾಡಿಕೊಂಡಿದ್ದಾರೆ. ಇತ್ತೀಚೆಗೆ, ಅವರ ಟೆಲಿಗ್ರಾಂ ಖಾತೆಗೆ, ‘ವಿ-2023- ಗ್ಲೋಬಲ್‌ ಹೈ ಸ್ಯಾಲರಿ ಗ್ರೂಪ್‌’ ಮೂಲಕ ವರ್ಕ್‌ ಫ್ರಂ ಹೋಮ್‌ನ ಕೆಲಸದ ಬಗ್ಗೆ ಆಸೆ ತೋರಿಸಲಾಗಿದೆ. ‘ಟಾಸ್ಕ್ ಕೊಡುತ್ತೇವೆ ನೀವು ಹಣ ಹಾಕಿ ಟಾಸ್ಕ್ ಮುಗಿಸಿದರೆ, ನಿಮ್ಮ ಖಾತೆಗೆ ನೀವು ಜಮಾ ಮಾಡಿದ ಹಣಕ್ಕೆ ಶೇ30 ರಷ್ಟು ಕಮಿಷನ್ ಹಣ ಜಮಾ ಮಾಡುತ್ತೇವೆ’ ಎಂದು ಆನ್‌ಲೈನ್‌ ವಂಚಕರು ನಂಬಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.  

ADVERTISEMENT

ಸುಲಭವಾಗಿ ಹಣಗಳಿಸಬಹುದೆಂದು ಮಹಿಳೆಯೂ ನಂಬಿದ್ದಾರೆ. ಎರಡು ಕಂತುಗಳಲ್ಲಿ ಒಟ್ಟು ₹2,20,000 ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡಿರುವ ಆನ್‌ಲೈನ್‌ ಕಳ್ಳರು ಮಹಿಳೆಗೆ ವಂಚಿಸಿದ್ದಾರೆ ಎನ್ನಲಾಗಿದೆ. 

ಮಾಹಿತಿ ತಂತ್ರಜ್ಞಾನ ಕಾಯ್ದೆ–2008ರ ಸೆಕ್ಷನ್‌ 66(ಡಿ), ಸೆಕ್ಷನ್‌ 420 ಅಡಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.