ADVERTISEMENT

ಅಸಂಘಟಿತ ಕಾರ್ಮಿಕರಿಗೆ ಸುರಕ್ಷತೆ, ಭದ್ರತೆ: ಸಚಿವ ಸಂತೋಷ್ ಲಾಡ್

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 5:21 IST
Last Updated 6 ಜುಲೈ 2025, 5:21 IST
ಬಳ್ಳಾರಿ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಕಾರ್ಯಕ್ರಮದ ಸ್ಮಾರ್ಟ್‌ಗಳನ್ನು ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಶನಿವಾರ ವಿತರಿಸಿದರು. ಶಾಸಕ ಜೆ.ಎನ್‌ ಗಣೇಶ್‌, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್‌ ಪಾಲ್ಗೊಂಡಿದ್ದರು
ಬಳ್ಳಾರಿ ಜಿಲ್ಲೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ಕಾರ್ಯಕ್ರಮದ ಸ್ಮಾರ್ಟ್‌ಗಳನ್ನು ಫಲಾನುಭವಿಗಳಿಗೆ ಕಾರ್ಮಿಕ ಇಲಾಖೆ ಸಚಿವ ಸಂತೋಷ್‌ ಲಾಡ್‌ ಶನಿವಾರ ವಿತರಿಸಿದರು. ಶಾಸಕ ಜೆ.ಎನ್‌ ಗಣೇಶ್‌, ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್‌ ಪಾಲ್ಗೊಂಡಿದ್ದರು   

ಬಳ್ಳಾರಿ: ‘ಅಸಂಘಟಿತ ಕಾರ್ಮಿಕರಿಗೆ ಸುರಕ್ಷತೆ ಮತ್ತು ವಿಶೇಷ ಸಾಮಾಜಿಕ ಭದ್ರತೆ ಒದಗಿಸುವುದು ರಾಜ್ಯ ಸರ್ಕಾರದ ಧ್ಯೇಯೋದ್ದೇಶ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ನಗರದ ವಾಲ್ಮೀಕಿ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಸುಮಾರು ಶೇ 85ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಜಿಡಿಪಿಯ ಶೇ 50ರಷ್ಟು ಅಸಂಘಟಿತ ವಲಯಗಳ ಕಾರ್ಮಿಕರ ಆದಾಯದಿಂದ ಬರುತ್ತದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆ ಆದ್ಯತೆಯಾಗಿದೆ’ ಎಂದರು.

ADVERTISEMENT

‘ನೋಂದಾಯಿತ ಅಸಂಘಟಿತ ಕಾರ್ಮಿಕರಿಗೆ ಅಪಘಾತ ಪರಿಹಾರ, ಮರಣ ಹೊಂದಿದಲ್ಲಿ, ಸಂಪೂರ್ಣ ದುರ್ಬಲತೆ ಹೊಂದಿದಲ್ಲಿ ಅವರ ನಾಮನಿರ್ದೇಶಿತರಿಗೆ ₹1 ಲಕ್ಷ ಪರಿಹಾರ, ಶಾಶ್ವತ ದುರ್ಬಲತೆ ಹೊಂದಿದರೆ ಮತ್ತು ತಾತ್ಕಾಲಿಕ ದುರ್ಬಲತೆ ಹೊಂದಿದರೆ ಆಸ್ಪತ್ರೆ ಚಿಕಿತ್ಸೆ ವೆಚ್ಚಕ್ಕಾಗಿ ₹1 ಲಕ್ಷ ಪರಿಹಾರ ನೀಡಲಾಗುತ್ತದೆ’ ಎಂದು ತಿಳಿಸಿದರು.

‘ಪೆಟ್ರೋಲ್ ಮತ್ತು ಡಿಸೇಲ್‌ ಮಾರಾಟದಿಂದ ರಾಜ್ಯಕ್ಕೆ ಬರುವ ತೆರಿಗೆ ಸಂಗ್ರಹದಲ್ಲಿ ಕನಿಷ್ಠ ಶೇ 1ರಷ್ಟು ಹಣವನ್ನು ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಗೆ ನೀಡಬೇಕೆಂದು ಕೋರಲಾಗಿದೆ. ಒಪ್ಪಿಗೆ ದೊರೆತಲ್ಲಿ, ₹1,500 ಕೋಟಿ ಸಂಗ್ರಹವಾಗಲಿದೆ. ಅದನ್ನು ನೇರವಾಗಿ ಸ್ಮಾರ್ಟ್ ಕಾರ್ಡ್ ಫಲಾನುಭವಿಗಳಿಗೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರೆ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ, ಕ್ಷೇಮಾಭಿವೃದ್ಧಿ ಮಂಡಳಿ ರಚಿಸಿ, 20 ವರ್ಗಗಳನ್ನು ಗುರುತಿಸಲಾಗಿದೆ. ಅಪಘಾತದಿಂದ ಫಲಾನುಭವಿ ನಿಧನರಾದರೆ ₹5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಿರುವುದು ಉತ್ತಮ ಕೆಲಸ’ ಎಂದರು.

ಗಿಗ್ ಕಾರ್ಮಿಕರ ವಿಮಾ ಯೋಜನೆ: ಇ-ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ತಲಾ ₹2 ಲಕ್ಷ ಅಪಘಾತ ಪರಿಹಾರ ಹಾಗೂ ಜೀವ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ₹4 ಲಕ್ಷಗಳ ವಿಮಾ ಸೌಲಭ್ಯ ಒದಗಿಸುವ ‘ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆ’ ಯನ್ನು ಜಾರಿಗೊಳಿಸಲಾಗಿದ್ದು, ಗಿಗ್ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಕಾರ್ಮಿಕರಿಗೆ ಸಚಿವರು ಸಾಂಕೇತಿವಾಗಿ ಸ್ಮಾರ್ಟ್ ಕಾರ್ಡ್ ವಿತರಿಸಿದರು. ಬಳ್ಳಾರಿ ಜಿಲ್ಲೆಯಲ್ಲಿ ವಿವಿಧ ವರ್ಗಗಳಡಿ ನೋಂದಾಯಿಸಿಕೊಂಡಿದ್ದ 2,400ಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಲು ವಾಲ್ಮೀಕಿ ಭವನದ ಆವರಣದಲ್ಲಿ 3 ಕೌಂಟರ್‌ಗಳನ್ನು ಹಾಕಲಾಗಿತ್ತು. 

ಬಳ್ಳಾರಿ ಸಂಸದ ಇ.ತುಕಾರಾಂ, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಸಂಡೂರು ಶಾಸಕಿ ಈ.ಅನ್ನಪೂರ್ಣ, ಸಂಸದ ಕೆ.ರಾಜಶೇಖರ ಬಸವರಾಜ ಹಿಟ್ನಾಳ್ ಮಾತನಾಡಿದರು.  ಸಿರುಗುಪ್ಪ ಶಾಸಕ ಬಿ.ಎಂ.ನಾಗರಾಜ, ಬಳ್ಳಾರಿ ಪಾಲಿಕೆ ಮೇಯರ್‌ ಮುಲ್ಲಂಗಿ ನಂದೀಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಲ್ಲಾ ಪಂಚಾಯಿತಿ ಸಿಇಒ ಮಹಮ್ಮದ್ ಹ್ಯಾರೀಸ್ ಸುಮೈರ್, ಎಸ್‌ಪಿ ಡಾ.ಶೋಭಾರಾಣಿ.ವಿ.ಜೆ., ಬಳ್ಳಾರಿ ಉಪ ವಿಭಾಗ ಕಾರ್ಮಿಕ ಅಧಿಕಾರಿ ಸಿದ್ದಪ್ಪ ಖೈನೂರು ಇದ್ದರು.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೌಕರರಿಗಾಗಿ ಜಿಲ್ಲಾ ಮಟ್ಟದಲ್ಲಿ ಸೊಸೈಟಿ ರಚಿಸಲಾಗಿದ್ದು ಅದರ ಮೂಲಕ ನೇರವಾಗಿ ಸರ್ಕಾರ ವೇತನ ಪಾವತಿಸಲಿದೆ
– ಸಂತೋಷ್‌ ಲಾಡ್‌ ಕಾರ್ಮಿಕ ಇಲಾಖೆ ಸಚಿವ
ಎಸ್‌ಸಿ–ಎಸ್‌ಟಿ ಅಭ್ಯರ್ಥಿಗಳಿಗೆ ಆಶಾ ದೀಪ 
‘ದೇಶದಲ್ಲಿಯೇ ಪ್ರಥಮ ಬಾರಿಗೆ ಬಳ್ಳಾರಿ ಜಿಲ್ಲೆಯಲ್ಲಿ ಆಶಾ ದೀಪ ಕಾರ್ಯಕ್ರಮ ಆರಂಭಿಸಲಾಗಿದ್ದು ಇದರಲ್ಲಿ ಯಾವುದೇ ಉದ್ದಿಮೆದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಅಥವಾ ಅಪ್ರೆಂಟಿಸ್ ತರಬೇತಿ ನೀಡಿದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ 2 ವರ್ಷದವರೆಗೆ ಪ್ರತಿ ತಿಂಗಳು ₹7 ಸಾವಿರ ಸಹಾಯಧನ ನೀಡಲಾಗುವುದು. ಜೆಎಸ್‌ಡಬ್ಲ್ಯೂ ಕಂಪನಿಗೆ ₹19 ಲಕ್ಷ ಚೆಕ್ ವಿತರಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.