ADVERTISEMENT

ಸಂಡೂರು | ಕಿರ್ಲೋಸ್ಕರ್‌ ದಾರಿ: 2ನೇ ಬಾರಿ ಪರಿಶೀಲನೆ

ಜಿಲ್ಲಾಧಿಕಾರಿಗೆ ವರದಿ ನೀಡಲು ಪರಿಶೀಲನಾ ತಂಡ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 7:01 IST
Last Updated 16 ಅಕ್ಟೋಬರ್ 2025, 7:01 IST
ಸಂಡೂರಿನ ರಣಜಿತ್‌ಪುರ ಗ್ರಾಮದ ವ್ಯಾಪ್ತಿಯಲ್ಲಿ ರಣಜಿತ್‌ಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ (ಆರ್‌ಐಪಿಎಲ್‌)’ ಸ್ಥಾಪಿಸಿರುವ ಚೆಕ್‌ಪೋಸ್ಟ್‌ ಬಳಿ ಅಧಿಕಾರಿಗಳು ಸಮಾಲೋಚನೆಯಲ್ಲಿ ತೊಡಗಿರುವುದು. 
ಸಂಡೂರಿನ ರಣಜಿತ್‌ಪುರ ಗ್ರಾಮದ ವ್ಯಾಪ್ತಿಯಲ್ಲಿ ರಣಜಿತ್‌ಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ (ಆರ್‌ಐಪಿಎಲ್‌)’ ಸ್ಥಾಪಿಸಿರುವ ಚೆಕ್‌ಪೋಸ್ಟ್‌ ಬಳಿ ಅಧಿಕಾರಿಗಳು ಸಮಾಲೋಚನೆಯಲ್ಲಿ ತೊಡಗಿರುವುದು.    

ಸಂಡೂರು: ಕಿರ್ಲೋಸ್ಕರ್‌ ಕಂಪನಿಯು ಸರ್ಕಾರದ ಪೂರ್ವಾನುಮತಿ ಇಲ್ಲದೇ ಕಂದಾಯ ಭೂಮಿಯ ಮೂಲಕ ಅದಿರು ಸಾಗಣೆ ಮಾಡುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ರಚನೆಯಾಗಿರುವ ಪರಿಶೀಲನಾ ತಂಡವು ಬುಧವಾರ ರಣಜಿತ್‌ ಪುರ ಗ್ರಾಮದಲ್ಲಿ ಎರಡನೇ ಬಾರಿಗೆ ಅವಲೋಕನ ನಡೆಸಿತು.  

ಅದಿರು ಸಾಗಣೆಗೆ ಕಿರ್ಲೋಸ್ಕರ್‌ ಕಂಪನಿ ಅನುಮತಿ ಇಲ್ಲದೇ ಕಂದಾಯ ಭೂಮಿ ಬಳಸುತ್ತಿರುವ ಕುರಿತು ಜನಸಂಗ್ರಾಮ ಪರಿಷತ್‌ ಬಳ್ಳಾರಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತ್ತು. ಈ ಕುರಿತು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ಜಿಲ್ಲಾಧಿಕಾರಿಯೂ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ, ಕೆಐಎಡಿಬಿ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದ್ದರು. 

ಈಗಾಗಲೇ ಒಂದು ಬಾರಿ ರಸ್ತೆಯ ಪರಿಶೀಲನೆ ನಡೆಸಿ ಹೋಗಿದ್ದ ತಂಡ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಧಿಕಾರಿಗಳ ಸಮಕ್ಷಮದಲ್ಲಿ ಬುಧವಾರ ಪರಿಶೀಲನೆ ನಡೆಸಿತು.  

ADVERTISEMENT

‘ರೈತರು ಅನಾದಿಕಾಲದಿಂದ ಬಳಸುತ್ತಿರುವ ಬಂಡಿದಾರಿಯಲ್ಲಿ ‘ರಣಜಿತ್‌ಪುರ ಇನ್‌ಫ್ರಾಸ್ಟ್ರಕ್ಚರ್‌ ಪ್ರೈವೇಟ್‌ ಲಿಮಿಟೆಡ್‌ (ಆರ್‌ಐಪಿಎಲ್‌)’ ಕಂಪನಿಯು ಚೆಕ್ ಪೋಸ್ಟ್ ಸ್ಥಾಪಿಸಿದೆ. ಇಲ್ಲಿ ಕಿರ್ಲೋಸ್ಕರ್‌ ಕಂಪನಿಯ ಅದಿರು ಲಾರಿಗಳ ಓಡಾಟಕ್ಕೆ ಮಾತ್ರವೇ ಅವಕಾಶ ನೀಡಲಾಗುತ್ತಿದೆ. ಆದರೆ, ರೈತರು, ಜಾನುವಾರಗಳ ಓಡಾಟವನ್ನು ನಿಯಂತ್ರಿಸಲಾಗುತ್ತಿದೆ. ಕೂಡಲೇ ಚೆಕ್‌ ಪೋಸ್ಟ್‌ ತೆರವು ಮಾಡಿ, ಜನ–ಜಾನುವಾರು ಓಡಾಡಲು ಅವಕಾಶ ಮಾಡಿಕೊಡಬೇಕು’ ಎಂದು ಜನಸಂಗ್ರಾಮ ಪರಿಷತ್‌ ಮತ್ತು ರೈತ ಮುಖಂಡರು ಆರೋಪಿಸಿದರು.

ಆದರೆ, ಇದಕ್ಕೆ ಒಪ್ಪದ ಆರ್‌ಐಪಿಎಲ್‌ ‘ಈ ರಸ್ತೆ ನಮಗೆ ಕೆಐಡಿಬಿಯಿಂದ ಸಿಕ್ಕಿದ್ದು. ಉದ್ದಿಮೆ ಜಾಗದಲ್ಲಿ ಜನರ ಓಡಾಟಕ್ಕೆ ಅವಕಾಶ ನೀಡುವುದಿಲ್ಲ’ ಎಂದು ವಾದಿಸಿತು. 

ಆರ್‌ಐಪಿಎಲ್‌ ನಿಲುವು ಪರಿಗಣಿಸದ ಅಧಿಕಾರಿಗಳು ರೈತರ ಓಡಾಟಕ್ಕೆ ಅವಕಾಶ ನೀಡಬೇಕಾಗಿ ತಾಕೀತು ಮಾಡಿದರು. ಬಳ್ಳಾರಿ ಉಪವಿಭಾಗಾಧಿಕಾರಿಯೇ ಹೇಳಿದರೂ, ಕಂಪನಿಯು ಚೆಕ್‌ ಪೋಸ್ಟ್‌ ತೆರವು ಮಾಡಲು ನಿರಾಕರಿಸಿತು.

ಅಂತಿಮವಾಗಿ ರೈತರು, ಸಾರ್ವಜನಿಕರ ಹಿತದೃಷ್ಟಿಯಿಂದ ತನ್ನದೇ ನಿರ್ಧಾರ ಕೈಗೊಂಡು, ಜಿಲ್ಲಾಧಿಕಾರಿಗೆ ವರದಿ ನೀಡುವುದಾಗಿ ಪರಿಶೀಲನಾ ತಂಡ ತಿಳಿಸಿತು. ಇದರೊಂದಿಗೆ ಅಧಿಕಾರಿಗಳ ತಂಡ ನೀಡುವ ವರದಿಯು ಕುತೂಹಲ ಮೂಡಿಸಿದೆ. ಜತೆಗೆ, ವರದಿ ಆಧರಿಸಿ ಜಿಲ್ಲಾಧಿಕಾರಿ ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದರತ್ತ ರೈತರು, ಹೋರಾಟಗಾರರ ದೃಷ್ಟಿ ನೆಟ್ಟಿದೆ. 

ರೈತರಿಗೆ ಓಡಾಡಲು ಅವಕಾಶ ನೀಡುವಂತೆ ಕಂಪನಿಗೆ ಸೂಚಿಸಲಾಯಿತು. ಈ ಕುರಿತು ನಮ್ಮ ತಂಡವು ಜಿಲ್ಲಾಧಿಕಾರಿಗೆ ವರದಿ ನೀಡಲಿದೆ. ಬಳಿಕ ಜಿಲ್ಲಾಧಿಕಾರಿ ಕ್ರಮ ಕೈಗೊಳ್ಳಲಿದ್ದಾರೆ. 
– ಪ್ರಮೋದ್‌, ಉಪ ವಿಭಾಗಾಧಿಕಾರಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.