ಸಂಡೂರು: ತಾಲ್ಲೂಕಿನ ಚೋರುನೂರು, ತೋರಣಗಲ್ಲು ಹೋಬಳಿಯ ಕೆಲ ಗ್ರಾಮಗಳಲ್ಲಿನ ಸಣ್ಣ ಹಿಡುವಳಿ ಹೊಂದಿರುವ ರೈತರು ಸಾಂಪ್ರದಾಯಿಕ, ತೋಟಗಾರಿಕಾ ಬೆಳೆಯಾದ ಚೆಂಡು ಹೂವನ್ನು ಸಮೃದ್ಧವಾಗಿ ಬೆಳೆದು ಅಧಿಕ ಲಾಭ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಕೆಲ ಗ್ರಾಮಗಳಲ್ಲಿನ ರೈತರು ತಮ್ಮ ಜಮೀನುಗಳಲ್ಲಿ ಚೆಂಡುಹೂವಿನ ಬೆಳೆಯನ್ನು ಸಮೃದ್ಧವಾಗಿ ಬೆಳೆದ್ದರಿಂದ ಹೂಗಳು ಕಂಗೊಳಿಸುವುದರ ಜೊತೆಗೆ ದಾರಿ ಹೊಕರನ್ನು ಆಕರ್ಷಿಸುತ್ತೀವೆ. ಚೋರುನೂರು ಹೋಬಳಿಯಲ್ಲಿ 1,100 ಎಕರೆ, ತೋರಣಗಲ್ಲು ಹೋಬಳಿಯಲ್ಲಿ 300 ಎಕರೆ, ಸಂಡೂರು ಹೋಬಳಿಯಲ್ಲಿ 100 ಎಕರೆ ಸೇರಿದಂತೆ ತಾಲ್ಲೂಕಿನ ಮೂರು ಹೋಬಳಿಯ ಗ್ರಾಮಗಳಲ್ಲಿ ಒಟ್ಟು 1,500 ಎಕರೆಯ ಜಮೀನಿನಲ್ಲಿ ಚೆಂಡು ಹೂವಿನ ಬೆಳೆಯನ್ನು ಬೆಳೆಯಲಾಗಿದೆ.
ರೈತರು ಹಲವಾರು ವರ್ಷಗಳಿಂದ ಹತ್ತಿ, ಜೋಳ, ಸಜ್ಜೆ, ನವಣೆ, ಶೇಂಗಾ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆದು, ಸಕಾಲಕ್ಕೆ ಮಳೆಯಾಗದಿದ್ದಾಗ ಬೆಳೆ ನಷ್ಠ ಹೊಂದಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಹತಾಶರಾಗುವುದು ಸಾಮಾನ್ಯವಾಗಿತ್ತು. ಪ್ರಸ್ತುತ ಸಾಂಪ್ರದಾಯಿಕ ಚೆಂಡು ಹೂವಿನ ಬೆಳೆಯತ್ತ ಮುಖಮಾಡಿದ್ದಾರೆ.
ಚೆಂಡು ಹೂವಿನ ಬೆಳೆಯು ಅತ್ಯಂತ ಜನಪ್ರಿಯ, ಉತ್ತಮ ಬೆಳೆವಣಿಗೆ, ಕಡಿಮೆ ಅವಧಿಯಲ್ಲಿ ಹೂ ಬಿಡುವ ಬೆಳೆಗಳಲ್ಲಿ ಒಂದಾಗಿದೆ. ಚೆಂಡು ಹೂವನ್ನು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಸಮಾರಂಭಗಳಲ್ಲಿ, ಔಷಧೀಯ ತಯಾರಿಕೆಯಲ್ಲಿ ಬಳಕೆ ಮಾಡಲಾಗುತ್ತಿದೆ. ಚೆಂಡು ಹೂವಿನ ಬೆಳೆಯನ್ನು ಸುಗಂಧ ದ್ರವ್ಯಗಳ ತಯಾರಿಕೆಗೆ ಬಳಿಸಿದ ನಂತರ ಉಳಿದ ಹೂವಿನ ತ್ಯಾಜ್ಯವನ್ನು ಕೋಳಿಗಳ ಆಹಾರಕ್ಕಾಗಿ ಅರಬ್ ದೇಶಗಳಿಗೆ ರವಾನಿಸಲಾಗುತ್ತಿದೆ.
ಬಹುಪಯೋಗಿ ಹೂವಿನ ಬೆಳೆಗೆ ಬಹಳಷ್ಟು ಬೇಡಿಕೆ ಇರುವುದರಿಂದ ರೈತರು ಆಹಾರ, ಇತರೆ ಬೆಳೆಗಳನ್ನು ಕೈಬಿಟ್ಟು ಹೂವಿನ ಬೆಳೆಯನ್ನು ಬೆಳೆಯಲು ಮುಂದಾಗಿದ್ದಾರೆ. ಕೆಲ ಖಾಸಗಿ ಕಂಪನಿಯವರು ರೈತರಿಗೆ ಹೂವಿನ ಬೀಜ, ಔಷಧಗಳನ್ನು ನೀಡಿ ಫಸಲನ್ನು ಆರಂಭದಿಂದ ಅಂತ್ಯದವರೆಗೂ ಉತ್ತಮವಾಗಿ ಬೆಳಸಲು ಅಗತ್ಯ ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಾರೆ. ಕಟಾವು ಮಾಡಿದ ಹೂಗಳನ್ನು ಖಾಸಗಿ ಕಂಪನಿಯವರೇ ಖರೀದಿಸಿ ರೈತರಿಗೆ ಹಣವನ್ನು ನೀಡುತ್ತಾರೆ.
‘ಸಣ್ಣ ರೈತರಿಗೆ ವರವಾದ ಈ ಬೆಳೆಯು ಮೂರು ತಿಂಗಳ ಅವಧಿಯ, ಕಡಿಮೆ ವೆಚ್ಚದ ಬೆಳೆಯಾಗಿದ್ದು, ನೀರಾವರಿ ಪ್ರದೇಶದ ರೈತರಿಗೆ ಬಹಳ ಉಪಯುಕ್ತವಾಗಿದೆ. ಈ ಬೆಳೆಗೆ ರೋಗ ಬಾಧೆಯು ಕಡಿಮೆ. ಭೂಮಿಯ ಫಲವತ್ತತೆಗೆ ಸಹಕಾರಿಯಾಗಿದ್ದು, ಗ್ರಾಮೀಣ ಪ್ರದೇಶದ ಬಡ ಜನರಿಗೆ ಉದ್ಯೋಗಾವಕಾಶವನ್ನು ಸೃಜಿಸಲು ಅನುಕೂಲಕರ ಬೆಳೆಯಾಗಿದೆ. ಒಂದು ಎಕರೆಗೆ ವೆಚ್ಚ ತೆಗೆದು ₹70 ಸಾವಿರ ಆದಾಯಗಳಿಸುತ್ತಿದ್ದಾರೆ’ ಎಂದು ಸಂಡೂರಿನ ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಅರಬ್ ದೇಶಗಳಿಗೂ ಹೂ ತ್ಯಾಜ್ಯ ರವಾನೆ ಖಾಸಗಿ ಕಂಪನಿಗಳಿಂದ ಬೀಜ ವಿತರಣೆ
ಪ್ರಸ್ತುತ ಮೂರು ಎಕರೆಯಲ್ಲಿ ನಾಲ್ಕು ಟನ್ ಚೆಂಡು ಹೂವು ಬೆಳೆದು ಕಟಾವು ಮಾಡಿ ಖಾಸಗಿ ಕಂಪನಿಗೆ ಮಾರಾಟ ಮಾಡಿ ಅಧಿಕ ಲಾಭದಲ್ಲಿದ್ದೇನೆತಾಯೇಶ್ ತುಮಟಿ ಗ್ರಾಮದ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.