ADVERTISEMENT

ಸಂಡೂರು ಪಟ್ಣಣಕ್ಕೆ ಐದು ದಿನಕ್ಕೊಮ್ಮೆ ನೀರು ಪೂರೈಸಿ: ಶಾಸಕಿ ಅನ್ನಪೂರ್ಣ ತಾಕೀತು

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 3:01 IST
Last Updated 22 ಜುಲೈ 2025, 3:01 IST
ಸಂಡೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ. ಸಭೆಯಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿದರು
ಸಂಡೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಕೆ.ಡಿ.ಪಿ. ಸಭೆಯಲ್ಲಿ ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿದರು   

ಸಂಡೂರು: ‘ಪಟ್ಟಣಕ್ಕೆ ಐದು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸಬೇಕು. ಮುಂದಿನ ದಿನಗಳಲ್ಲಿ ಎಲ್ಲ ವಾರ್ಡ್‍ಗಳನ್ನು ವೀಕ್ಷಿಸಿ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಲಾಗುವುದು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸೋಮವಾರ ಆಯೋಜಿಸಿದ್ದ 2025-26ನೇ ಸಾಲಿನ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. 

‘ಕೆಲ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟು ಮೂರು ವರ್ಷಗಳಾಗಿವೆ. ಅವುಗಳನ್ನು ತ್ವರಿತವಾಗಿ ಸರಿಪಡಿಸಬೇಕು’ ಎಂದು ಸೂಚಿಸಿದರು.

ADVERTISEMENT

‘ಕೆಟ್ಟಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಪಡಿಸಲು ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು ಕ್ರಮ ಕೈಗೊಳ್ಳಬೇಕು. ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಅಭಿವೃದ್ಧಿಗೆ ನರೇಗಾ ಅನುದಾನ ಬಳಸಿಕೊಳ್ಳಬೇಕು’ ಎಂದು ಬಳ್ಳಾರಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.

‘ತಾಲ್ಲೂಕಿನ ವಿದ್ಯುತ್‌ ಸಮಸ್ಯೆಗೆ ಜೆಸ್ಕಾಂ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಶಾಸಕಿ ತಾಕೀತು ಮಾಡಿದರು. 

ಆಗ ಮಾತನಾಡಿದ ಜೆಸ್ಕಾಂ ಅಧಿಕಾರಿ ಉಮೇಶ್, ‘ಗಣಿ ಬಾಧಿತ ಗ್ರಾಮಗಳಲ್ಲಿ ಮಳೆ, ಗಾಳಿಯಿಂದ ತಂತಿಗಳ ಮೇಲೆ ಮರಗಳು ಬೀಳುತ್ತವೆ. ದೌಲತ್‍ಪುರ ಗ್ರಾಮದಲ್ಲಿ ಉಪವಿದ್ಯುತ್ ಕೇಂದ್ರ ಆರಂಭಿಸಿದರೆ ಪಟ್ಟಣದಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ. ರಣಜಿತ್‍ಪುರ ಗ್ರಾಮದ ಪರಿಶಿಷ್ಟ ಸಮುದಾಯದ ಕಾಲೊನಿಯಲ್ಲಿ 200 ಕುಟುಂಬಗಳಿದ್ದು, ನಾಲ್ಕು ಮನೆಗಳು ಮಾತ್ರ ಆರ್‌ಆರ್ ನಂಬರ್ ಪಡೆದಿವೆ. ಇನ್ನುಳಿದವರು ಮೀಟರ್ ಪಡೆಯುತ್ತಿಲ್ಲ’ ಎಂದರು. 

ಸುಶೀಲಾನಗರ ಶಾಲೆ ಪ್ರಾಂಶುಪಾಲ ಕೆ.ಎಸ್.ಕರ್ಜಗಿ ಮಾತನಾಡಿ, ‘ನಮ್ಮ ಶಾಲೆಯು ಗ್ರಾಮದಿಂದ ದೂರ ಇದ್ದು ಬಸ್‍ ಸೇವೆ ಬೇಕು. ಬಸ್ ನಿಲ್ದಾಣ ನಿರ್ಮಿಸಬೇಕು ಎಂದು ಶಾಸಕರಿಗೆ ಮನವಿ ಮಾಡಿದರು. ಡಿಪೊ ವ್ಯವಸ್ಥಾಪಕ ಲಕ್ಷ್ಮಣ ಮಾತನಾಡಿ, ಬಸ್‍ಗಳ ನಿಲುಗಡೆಗೆ ಅರ್ಜಿ ಬಂದಿದ್ದು, ಶೀಘ್ರವೇ ಬಸ್‍ ನಿಲುಗಡೆ ಕ್ರಮಕೈಗೊಳ್ಳಲಾಗುವುದು’ ಎಂದು ಸಭೆಗೆ ತಿಳಿಸಿದರು.

ತಹಶೀಲ್ದಾರ್ ಅನಿಲ್‍ಕುಮಾರ್ ಜಿ. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಇದ್ದರು.

ಜಲ ಸಂಗ್ರಹ ಅಂತರ್ಜಲ ಪ್ರಮಾಣ ಹೆಚ್ಚಿಸಲು ಸಣ್ಣ ನೀರಾವರಿ ಇಲಾಖೆಯು ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು. ಗ್ರಾಮಗಳಲ್ಲಿ ಚರಂಡಿಯ ಮೇಲೆ ಅಕ್ರಮವಾಗಿ ಕಟ್ಟಿದ ಕಟ್ಟಡಗಳನ್ನು ತೆರವುಗೊಳಿಸಬೇಕು
ಅನ್ನಪೂರ್ಣ ತುಕಾರಾಂ ಶಾಸಕಿ

ಖಾಲಿ ಸೀಟ್‍ಗಳ ಭರ್ತಿಗೆ ₹20 ಸಾವಿರ ಲಂಚ: ತಿದ್ದಿಕೊಳ್ಳಿ

‘ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಖಾಲಿ ಸೀಟ್‍ಗಳ ಭರ್ತಿಗೆ ₹20 ಸಾವಿರ ಲಂಚ ಪಡೆಯುತ್ತಿರುವುದಾಗಿ ಗೊತ್ತಾಗಿದೆ. ಅಂಥವರು ತಿದ್ದಿಕೊಳ್ಳಬೇಕು. ಚೋರುನೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅಡುಗೆ ಕೋಣೆಯಲ್ಲಿ ಇಲಿ ಹೆಗ್ಗಣಗಳಿವೆ. ಶಾಲೆಯ ಪ್ರಾಂಶುಪಾಲರು ಸ್ವಚ್ಛತೆ ಕಾಪಾಡುವುದರಲ್ಲಿ ವಿಫಲರಾಗಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಶಾಸಕಿ ಅನ್ನಪೂರ್ಣ ತುಕಾರಾಂ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.