ADVERTISEMENT

ಸಂಗಂ ವಿಶ್ವಕವಿ ಸಮ್ಮೇಳನ: ನೋವಿಗೆ ಧ್ವನಿಯಾಗುತ್ತ...

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 8:41 IST
Last Updated 23 ಅಕ್ಟೋಬರ್ 2022, 8:41 IST
ಸಂಗಂ ವಿಶ್ವಕವಿ ಸಮ್ಮೇಳನ
ಸಂಗಂ ವಿಶ್ವಕವಿ ಸಮ್ಮೇಳನ   

ಬಳ್ಳಾರಿ, ಡಾ.ಜೋಳದರಾಶಿ ದೊಡ್ಡನಗೌಡರ ವೇದಿಕೆ:ನನ್ನ ಕವಿತೆಗಳನ್ನು ಇಂಗ್ಲಿಷ್‌ನಲ್ಲಿ ಓದುವುದು ನನಗೆ ಸುತರಾಂ ಇಷ್ಟವಿಲ್ಲ. ಆದರೆ ಈಗ ಅನಿವಾರ್ಯ ಆಗಿರುವುದರಿಂದ ಮೊದಲ ಸಲ ಓದುತ್ತಿರುವೆ. ಆದರೆ ಮೊದಲು ಸ್ಪ್ಯಾನಿಷ್‌ ಭಾಷೆಯಲ್ಲಿಯೇ ಓದುವೆ ಎನ್ನುತ್ತಲೇ ರೋಝಾ ಝಮೋರಾ ತಮ್ಮ ಕವಿತೆಗಳನ್ನು ವಾಚಿಸಿದರು.

ಬಳ್ಳಾರಿಯ ಅರಿವು ಮತ್ತು ಸಂಗಂ ವಿಶ್ವಕವಿ ಸಮ್ಮೇಳನದ ಹದಿನಾರನೆಯ ಗೋಷ್ಠಿಯಲ್ಲಿ ವೀಸಾ ಕಾರಣದಿಂದಾಗಿ ಬರಲಾಗಲಿಲ್ಲ ಎನ್ನುತ್ತಲೇ ಕವಿತೆಯ ಓದನ್ನು ಆರಂಭಿಸಿದರು.

ನೆರೆಯುಕ್ಕಿದಾಗ, ನನ್ನ ಅಮ್ಮ ಮತ್ತು ಅವರು ಎಲ್ಲವನ್ನೂ ತೆಗೆದುಕೊಳ್ಳಲಿ ಎಂಬ ಕವಿತೆಗಳನ್ನು ಓದಿದರು. ಸುಧಾ ಆಡುಕಳ ಅನುವಾದಿಸಿದ ಕವನಗಳನ್ನು ಜೋರುಧ್ವನಿಯಲ್ಲಿ ಏರು ಧ್ವನಿಯಲ್ಲಿ ಡಾ. ತಿಪ್ಪೆರುದ್ರಪ್ಪ ಅವರು ವಾಚಿಸಿದರು. ಕವಿತೆಯ ನವಿರು ಭಾವಗಳೂ ಕ್ರಾಂತಿಗೀತೆಯಂತೆ ಧ್ವನಿಸಿದವು.

ಅನಾಮಿಕಾ ಅನು ಕೇರಳದಿಂದ ಅಮ್ಮ ಏಕಾಕಿಯಾದಳು ಕವಿತೆಯನ್ನು ಓದಿದರು.ಮೈಲೈ ಹಳ್ಳಿ ಹುಡುಗಿಯರ ಸಮಾಧಿ (1968)ಕ್ಷಮೆ ಎಂಬ ಕವಿತೆಗಳನ್ನು ಓದಿದರು. ಪ್ರತಿಕವಿತೆಯೂ ಕೇಳುಗರ ಕಂಗಳಲ್ಲಿ ಪಸೆಯನ್ನು ಉಳಿಸಿದವು. ಚಪ್ಪಾಳೆಯನ್ನೂ ಗಿಟ್ಟಿಸಿದವು.

ADVERTISEMENT

ಕಲಮಾಕರ ಕಡವೆ ಅನುವಾದಿಸಿದ ಕವಿತೆಗಳನ್ನು ಜ್ಯೋತಿ. ಪಾಟೀಲರು ವಾಚಿಸಿದರು. ಮೈಲೈ ಹಳ್ಳಿಯ ಹುಡುಗಿಯರು ಕವನದಲ್ಲಿ ಬರುವ ಸಮರಸಮಯದಲ್ಲಿ ಮಹಿಳೆಯರ ಮೇಲಿನ ಶೋಷಣೆಯನ್ನು ಬಿಚ್ಚಿಟ್ಟಿತು. ಜಗತ್ತಿನ ಎಲ್ಲ ಮೂಲೆಯಲ್ಲಿಯೂ ಯುವತಿಯರು ಯುದ್ಧಕ್ರೌರ್ಯಗಳಿಗೆ ಬಲಿಯಾಗುವ ನೋವನ್ನು ಬಿಚ್ಚಿಟ್ಟಿತು. ಇರಾಕಿನ ಯುವತಿ, ವಿಶ್ವಸಂಸ್ಥೆಯಲ್ಲಿ ಆಕ್ರಂದಿಸುತ್ತ ತನ್ನ ಕತೆ ಹೇಳಿದಾಗ, ಮೈಲೈ ಗೋರಿಗಳಲ್ಲಿದ್ದ ಹುಡುಗಿಯರು ಎಚ್ಚೆತ್ತರಂತೆ ಎಂಬ ಮನೋಜ್ಞ ಸಾಲುಗಳು ನೋವಿನ ತಂತು ಒಂದೇ ಎಂಬಂತೆ ಧ್ವನಿಸಿತು.

ಗಿರೀಶ ಜಕಾಪುರೆ ಗಜಲ್‌ ವಾಚಿಸಿದರು. ದ್ವೇಷಿಸಿದವರು ರಾಜ್ಯವನ್ನು ಕಟ್ಟಬಹುದು, ಕವಿತೆಯನ್ನಲ್ಲ ಎಂದು ಮೊದಲ ಸಾಲಿನಿಂದಲೇ ಚಪ್ಪಾಳೆಯ ಮೆಚ್ಚುಗೆ ಪಡೆಯುತ್ತಲೇ ಹೋದರು. ಅಹಂ ಅಳಿಯಬಲ್ಲೆಯಾದರೆ ಬುದ್ಧನಾಗಬಲ್ಲೆ ಎಂಬ ಗಜಲ್‌ ಸಹ ಮನಮುಟ್ಟಿತು.

ಅನುವಾದಕ ಉದಯ್‌ ಇಟಗಿ ಅವರು ಇಡೀ ಗೋಷ್ಠಿಯ ಕಾವ್ಯವನ್ನು ಭಾರತೀಯ ಸಾಹಿತ್ಯ ಸಂಸ್ಕೃತಿ, ದೇಸಿ ಸಂಸ್ಕೃತಿ ಮತ್ತು ಕನ್ನಡ ಸಾಹಿತ್ಯದೊಂದಿಗೆ ತಳಕು ಹಾಕುತ್ತ ನುಡಿ ಸ್ಪಂದನೆಯಲ್ಲಿ ಮಾತನಾಡಿದರು.

ನನ್ನ ಅಮ್ಮ ಝಮೋರಾ ಅವರ ಕವಿತೆ, ಅನಾಮಿಕಾ ಅವರ ಅಮ್ಮ ಏಕಾಕಿಯಾದಳು ಜೊತೆಗೆ ಲಂಕೇಶ್‌ ಅವರ ಅವ್ವ ಕವಿತೆಯನ್ನೂ ನೆನಪಿಸಿಕೊಂಡರು. ಪ್ರತಿ ಕವಿತೆಯನ್ನೂ, ಅನುವಾದವನ್ನೂ, ವಾಚನವನ್ನೂ ಶ್ಲಾಘಿಸುತ್ತ ತಮ್ಮ ನುಡಿಸ್ಪಂದನೆಗೆ ಪೂರ್ಣವಿರಾಮ ಇತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.