
ಬಳ್ಳಾರಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿಗೆ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಗರದ ಮಾರುಕಟ್ಟೆಯಲ್ಲಿ ನಾಗರಿಕರು ಹೂ, ಹಣ್ಣು, ಕಬ್ಬು, ಗೆಣಸು, ತರಕಾರಿ ಖರೀದಿಯಲ್ಲಿ ಮಗ್ನರಾಗಿದ್ದದ್ದು ಕಂಡು ಬಂತು.
ಬಳ್ಳಾರಿಯಲ್ಲಿ ಸಂಕ್ರಾಂತಿ ಹಿಂದಿನ ದಿನವೇ ಹಬ್ಬ ಆರಂಭವಾಗುತ್ತದೆ. ಹೀಗಾಗಿ ಪ್ರತಿ ಮನೆಗಳ ಎದುರು ಸಗಣಿಯಿಂದ ಸಾರಿಸಿ, ರಂಗೋಲಿ ಹಾಕಿ, ಹೂ, ತರಕಾರಿಗಳನ್ನು ಇಟ್ಟು ಪೂಜೆ ಮಾಡಲಾಗಿತ್ತು.
ಮನೆಗಳ ಎದುರು ಬಣ್ಣ ಬಣ್ಣದ ರಂಗೋಲಿ ಬಿಡಿಸಲು ಮಹಿಳೆಯರು ಬಣ್ಣ, ರಂಗೋಲಿ ಹಿಟ್ಟು ಖರೀದಿಸುತ್ತಿದ್ದ ದೃಶ್ಯಗಳು ಸಾಮಾನ್ಯ ಎಂಬಂತಿತ್ತು.
ಹೂ, ಹಣ್ಣು, ತರಕಾರಿ ಬೆಲೆಯಲ್ಲಿ ಕಳೆದ ವಾರಕ್ಕಿಂತಲೂ ಈ ವಾರ ಏರಿಕೆಯಾಗಿದೆ. ನಗರದ ಸಣ್ಣ ಮಾರುಕಟ್ಟೆಯಲ್ಲಿ ಜನ ಹೂ, ಹಣ್ಣು ಖರೀದಿಗಾಗಿ ಮುಗಿಬಿದ್ದಿದ್ದರು. ಕಬ್ಬಿನ ವ್ಯಾಪಾರ ಅದಾಗಲೇ ಮೂರ್ನಾಲ್ಕು ದಿನಗಳಿಂದಲೂ ಜೋರಾಗಿ ನಡೆಯುತ್ತಿದೆ.
ಬೆಲೆ ಎಷ್ಟೇ ಆದರೂ, ವರ್ಷದ ಮೊದಲ ಹಬ್ಬವನ್ನು ಆಚರಿಸಲೇ ಬೇಕಲ್ಲವೇ ಎಂದು ನಗರದ ಸತ್ಯನಾರಾಯಣ ಪೇಟೆಯ ಲಕ್ಷ್ಮೀ ನಗುತ್ತಲೇ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.