ಸಂಡೂರು: ‘ಅಖಿಲ ಕರ್ನಾಟಕ ಕುಳುವ ಸಮಾಜದ ನೂತನ ಮಹಾಸಂಸ್ಥಾನ ಮಠದ ನಿರ್ಮಾಣಕ್ಕಾಗಿ ಐದು ಎಕೆರೆಯ ಭೂಮಿಯನ್ನು ಶೀಘ್ರ ಖರೀದಿಸಲಾಗುವುದು. ರಾಜ್ಯದಲ್ಲಿನ ಕುಳುವ ಸಮುದಾಯದ ಸಮಗ್ರ ಅಭಿವೃದ್ಧಿ, ಸೂಕ್ತ ಮಾರ್ಗದರ್ಶನಕ್ಕಾಗಿ ನೂತನ ಮಠಕ್ಕೆ ಗುರುಗಳ ಅವಶ್ಯಕತೆಯಿದ್ದು, ಸಮುದಾಯದ ಎಲ್ಲ ಮುಖಂಡರು ನೂತನ ಗುರುಗಳ ನೇಮಕಕ್ಕೆ ಸೂಕ್ತ ಕ್ರಮವಹಿಸಬೇಕು’ ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಪಟ್ಟಣದ ಆದರ್ಶ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘದ ಸಂಡೂರು ತಾಲ್ಲೂಕು ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶರಣ ನೂಲಿಯ ಚಂದಯ್ಯ ಅವರ 918ನೇ ಜಯಂತಿಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಸಂಡೂರು ಪಟ್ಟಣದಲ್ಲಿನ ಕೊರಮ, ಕೊರಚ, ಕೊರವ ಸಮುದಾಯಗಳ ಬಡ ಜನರಿಗೆ ಸರ್ಕಾರದಿಂದ ನಿವೇಶನ, ವಸತಿ ಸೌಲಭ್ಯ ಕಲ್ಪಿಸಲಾಗುವುದು. ಸಮುದಾಯದ ಜನರ ಧಾರ್ಮಿಕ ಕಾರ್ಯಗಳ ಅನುಕೂಲಕ್ಕಾಗಿ ನೂತನ ಆಧುನಿಕ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗುವುದು. ರಾಜ್ಯದಲ್ಲಿನ 15 ಲಕ್ಷ ಕಾರ್ಮಿಕರಿಗೆ ಆರೋಗ್ಯ ವಿಮೆ ಜಾರಿಗೊಳಿಸಲಾಗಿದೆ’ ಎಂದರು.
ಜಗದ್ಗುರು ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿ ಮಾತನಾಡಿ, ‘ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿದ್ದು, ಈ ಎಲ್ಲ ಶೋಷಿತ ಸಮುದಾಯಗಳ ಅಭಿವೃದ್ಧಿಗಾಗಿ ರಾಜ್ಯದಲ್ಲಿನ ಪರಿಶಿಷ್ಟರು ಒಗ್ಗಟ್ಟಿನಿಂದ ಇರಬೇಕು. ಸಚಿವ ಸಂತೋಷ್ ಲಾಡ್ ಅವರು ಶೋಷಿತ ಸಮುದಾಯಗಳ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಸಂತಸದ ವಿಚಾರ’ ಎಂದರು.
ಶರಣ ನೂಲಿಯಚಂದಯ್ಯ ಜಯಂತಿಯ ಕಾರ್ಯಕ್ರಮದ ಅಂಗವಾಗಿ ಸಮುದಾಯ ವತಿಯಿಂದ ಪಟ್ಟಣದ ಮಿನಿವಿಧಾನಸೌಧದಿಂದ ಆದರ್ಶಕಲ್ಯಾಣ ಮಂಟಪದವರೆಗೂ ಶರಣರ ಭಾವಚಿತ್ರ ಮೆರವಣಿಗೆ ನಡೆಯಿತು. ಮಹಿಳೆಯರು ಪೂರ್ಣ ಕುಂಭ, ಕಳಸ ಹೊತ್ತು ಸಾಗಿದರು.
ಸಂಡೂರಿನ ವಿರಕ್ತಮಠದ ಪ್ರಭುಸ್ವಾಮೀಜಿ, ಸುಕ್ಷೇತ್ರದ ಮಧುರೆಯ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಶಿವಮೊಗ್ಗದ ನಾರಾಯಣ ಮಠದ ರೇಣುಕಾನಂದ ಸ್ವಾಮೀಜಿ, ಕೂಲಹಳ್ಳಿ ಮಠದ ಷಟ್ಟದ ಚಿನ್ಮಯ ಸ್ವಾಮೀಜಿ, ಸಂಸದ ಇ.ತುಕಾರಾಂ, ಶಾಸಕಿ ಅನ್ನಪೂರ್ಣ ತುಕಾರಾಂ, ಡಾ.ಬಾಬು ಜಗಜೀವನ್ ರಾಂ ಚರ್ಮ ನಿಗಮದ ಅಧ್ಯಕ್ಷ ಮುಡ್ರಿಗಿ ನಾಗರಾಜ್, ಮಾಜಿ ಶಾಸಕ ಭೀಮಾನಾಯ್ಕ್, ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ.ಶಿವಾನಂದ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ರಮೇಶ್, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
‘ಮೀಸಲಾತಿಯಲ್ಲಿ ಅನ್ಯಾಯ: ಹೋರಾಟ ಅಗತ್ಯ’
‘ರಾಜ್ಯದಲ್ಲಿನ ಸರ್ಕಾರವು ಕೊರಮ ಕೊರಚ ಕೊರವ ಲಂಬಾಣಿ ಬೋವಿ ಅಲೆಮಾರಿ ಜಾತಿಗಳನ್ನು ಸ್ಪೃಶ್ಯ ‘ಸಿ’ ಗುಂಪಿಗೆ ಸೇರಿಸಿರುವುದು ಸರಿಯಲ್ಲ. ಈ ಶೋಷಿತ ಸಮುದಾಯಗಳ ಸಾಮಾಜಿಕ ಶೈಕ್ಷಣಿಕ ಆರ್ಥಿಕ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಶಾಶ್ವತ ಅಲೆಮಾರಿ ಆಯೋಗವನ್ನು ಸ್ಥಾಪಿಸಬೇಕು. ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು. ಪ್ರಸ್ತುತ ಮೀಸಲಾತಿಯಲ್ಲಿ ಈ ಸಮಾಜಗಳಿಗೆ ಅನ್ಯಾಯವಾಗಿದ್ದು ಸಮಾಜದ ಎಲ್ಲ ಜನರು ಸೂಕ್ತ ನ್ಯಾಯಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡುವ ಅಗತ್ಯವಿದೆ’ ಎಂದು ಕರ್ನಾಟಕ ಪರಿಶಿಷ್ಟ ಜಾತಿ ಪಂಗಡ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.