ADVERTISEMENT

ಮುಂಗಾರು ಮುನಿಸು; ಕೃಷಿಗೆ ಹಿನ್ನಡೆ

ಹೂವಿನಹಡಗಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ 66ರಷ್ಟು ಮಳೆ ಕೊರತೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 19:45 IST
Last Updated 4 ಜೂನ್ 2019, 19:45 IST
ದೇವಗೊಂಡನಹಳ್ಳಿ ಬಳಿ ಮುಂಗಾರು ಬಿತ್ತನೆಗಾಗಿ ರೈತರು ಭೂಮಿ ಹದಗೊಳಿಸಿರುವುದು
ದೇವಗೊಂಡನಹಳ್ಳಿ ಬಳಿ ಮುಂಗಾರು ಬಿತ್ತನೆಗಾಗಿ ರೈತರು ಭೂಮಿ ಹದಗೊಳಿಸಿರುವುದು   

ಹೂವಿನಹಡಗಲಿ: ಸತತ ಬರಗಾಲದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಈ ವರ್ಷದ ಮುಂಗಾರು ಆಶಾದಾಯಕವಾಗಿಲ್ಲ.

ಜೂನ್‌ ಮೊದಲ ವಾರ ಕಳೆದರೂ ಹದ ಮಳೆ ಸುರಿಯದೇ ಇರುವುದರಿಂದ ತಾಲ್ಲೂಕಿನಲ್ಲಿ ಮುಂಗಾರು ಕೃಷಿ ಚಟುವಟಿಕೆಗಳು ಕುಂಠಿತವಾಗಿವೆ. ಮೇ ಅಂತ್ಯಕ್ಕೆ ವಾಡಿಕೆ ಮಳೆ 74 ಮಿ.ಮೀ. ಸುರಿಯಬೇಕಿತ್ತು. ಆದರೆ, 25 ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನಲ್ಲಿ ಶೇ 66ರಷ್ಟು ಮಳೆ ಕೊರತೆ ಆಗಿರುವುದರಿಂದ ಮುಂಗಾರು ಬಿತ್ತನೆಗೆ ಹಿನ್ನಡೆಯಾಗಿದೆ.

ಮೇ ಆರಂಭದಲ್ಲಿ ಇಟ್ಟಿಗಿ ಮತ್ತು ಹಿರೇಹಡಗಲಿ ಹೋಬಳಿಯ ಕೆಲವು ಗ್ರಾಮಗಳಲ್ಲಿ ಮಳೆಯಾಗಿದ್ದರಿಂದ ರೈತರು ಉಳುಮೆಯೊಂದಿಗೆ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಹಡಗಲಿ, ಹಿರೇಹಡಗಲಿ ಹೋಬಳಿಯ ಕೆಲ ಗ್ರಾಮಗಳಲ್ಲಿ ಮಳೆಯ ಕೊರತೆಯಿಂದ ಕೃಷಿ ಚಟುವಟಿಕೆಗಳೇ ಆರಂಭವಾಗಿಲ್ಲ.

ADVERTISEMENT

2018ರ ಮುಂಗಾರಿನಲ್ಲಿ 192 ಮಿ.ಮೀ. ಮಳೆಯಾಗಿತ್ತು. ವಾಡಿಕೆ ಮಳೆ111 ಮಿ.ಮೀ. ವಾಡಿಕೆಗಿಂತ ಅಧಿಕ ವರ್ಷಧಾರೆಯಾಗಿತ್ತು. ಜೂನ್‌ ಮೊದಲ ವಾರದಲ್ಲಿ 9,295 ಹೆಕ್ಟೇರ್ (ಶೇ 17ರಷ್ಟು) ಬಿತ್ತನೆಯಾಗಿತ್ತು. ಈ ವರ್ಷ ಮಳೆಯ ಅಭಾವದಿಂದ ಬಿತ್ತನೆ ಕಾರ್ಯ ಇನ್ನೂ ಆರಂಭವಾಗಿಲ್ಲ.

ರೈತರಿಗೆ ರೋಹಿಣಿ ಮಳೆ ನಕ್ಷತ್ರದ ಮೇಲೆ ಅಪಾರ ನಂಬಿಕೆ. ‘ರೋಹಿಣಿ ಮಳೆಗೆ ಬಿತ್ತನೆ ಮಾಡಿದರೆ ಓಣಿ ತುಂಬಾ ಫಸಲು’ ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ. ಈ ಮಳೆ ಪ್ರವೇಶವಾಗಿ ವಾರ ಕಳೆದರೂ ಮಳೆ ಸುರಿಯದೇ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕಳೆದ ವರ್ಷ ಆರಂಭಿಕ ಮುಂಗಾರು ಉತ್ತಮವಾಗಿದ್ದರಿಂದ ತಾಲ್ಲೂಕಿನಲ್ಲಿ ಶೇ 99.58ರಷ್ಟು ಬಿತ್ತನೆಯಾಗಿತ್ತು. ಬೆಳೆಗಳು ಕಾಳು ಕಟ್ಟುವ ಹಂತದಲ್ಲಿರುವಾಗ ಮಳೆ ಕೈ ಕೊಟ್ಟಿದ್ದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಮುಂಗಾರು ಮತ್ತು ಹಿಂಗಾರು ಕೈ ಹಿಡಿಯದೇ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ತಾಲ್ಲೂಕಿನ 74,878 ಹೆಕ್ಟೇರ್ ಸಾಗುವಳಿ ಯೋಗ್ಯ ಭೂಮಿಯಲ್ಲಿ 53,961 ಹೆಕ್ಟೇರ್ ಮುಂಗಾರು ಬಿತ್ತನೆಗೆ ಕೃಷಿ ಇಲಾಖೆ ಗುರಿ ನಿಗದಿಪಡಿಸಿದೆ. ಮುಂಗಾರು ಬಿತ್ತನೆಗಾಗಿ 56 ಕ್ವಿಂಟಲ್ ಜೋಳ, 120 ಟನ್ ಮೆಕ್ಕೆಜೋಳ, 30 ಕ್ವಿಂಟಲ್ ಹೆಸರು, 360 ಕ್ವಿಂಟಲ್ ತೊಗರಿ, 24 ಕ್ವಿಂಟಲ್ ಸಜ್ಜೆ, 15 ಕ್ವಿಂಟಲ್ ರಾಗಿ, 32 ಕ್ವಿಂಟಲ್ ಸೂರ್ಯಕಾಂತಿ, 10 ಕ್ವಿಂಟಲ್ ಭತ್ತದ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.

ಇಟ್ಟಿಗಿ, ಹಡಗಲಿ, ಹಿರೇಹಡಗಲಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜಗಳ ಮಾರಾಟ ನಡೆಯಲಿದೆ. ರೈತರ ಅನುಕೂಲಕ್ಕಾಗಿ ಹೊಳಲು, ಹಿರೇಮಲ್ಲನಕೆರೆ ಮತ್ತು ಹೊಳಗುಂದಿಯಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ’ ಎಂದು ಕೃಷಿ ಅಧಿಕಾರಿ ಶಿವಮೂರ್ತಿ ನಾಯ್ಕ ತಿಳಿಸಿದರು.

‘ಹವಾಮಾನ ಇಲಾಖೆ ಮುನ್ಸೂಚನೆಯಂತೆ ಜೂನ್‌ 8ಕ್ಕೆ ಮುಂಗಾರು ಮಳೆ ಸುರಿಯುವ ನಿರೀಕ್ಷೆ ಇದೆ. ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ಗೊಬ್ಬರ ಮಾರಾಟ ಮಾಡಲಾಗುತ್ತಿದ್ದು, ರೈತರು ಸಿದ್ಧತೆ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.