ADVERTISEMENT

‌ಮಕ್ಕಳ ಪ್ರವೇಶಾತಿಗೆ ಪೋಷಕರ ನಿರಾಸಕ್ತಿ

ಮೊದಲ ದಿನ ಶಾಲೆಗಳತ್ತ ಸುಳಿಯದ ಮಕ್ಕಳ ತಂದೆ–ತಾಯಿ; ಮೂರನೇ ಅಲೆ ಭಯ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಜೂನ್ 2021, 13:58 IST
Last Updated 16 ಜೂನ್ 2021, 13:58 IST
ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಗಳವಾರ ಹೊಸಪೇಟೆಯ ನರ್ಬದಾ ದೇವಿ ಶಾಲೆಯ ಬಾಗಿಲು ತೆರೆಯಲಾಗಿತ್ತು–ಪ್ರಜಾವಾಣಿ ಚಿತ್ರ
ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಮಂಗಳವಾರ ಹೊಸಪೇಟೆಯ ನರ್ಬದಾ ದೇವಿ ಶಾಲೆಯ ಬಾಗಿಲು ತೆರೆಯಲಾಗಿತ್ತು–ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮಂಗಳವಾರದಿಂದ (ಜೂ.15) ಈ ತಿಂಗಳ ಅಂತ್ಯದ ವರೆಗೆ ಶಾಲೆಗಳಲ್ಲಿ ಮಕ್ಕಳ ಪ್ರವೇಶ ಪ್ರಕ್ರಿಯೆ ಆರಂಭಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಆದರೆ, ಮೊದಲ ದಿನ ಅದಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಮಂಗಳವಾರ ಬಹುದಿನಗಳ ಬಳಿಕ ಶಾಲೆಗಳು ಬಾಗಿಲು ತೆರೆದಿದ್ದವು. ಆದರೆ, ಹೆಚ್ಚಿನ ಶಾಲೆಗಳತ್ತ ಯಾರೊಬ್ಬರೂ ಸುಳಿಯಲಿಲ್ಲ. ಒಂದೆರಡು ಶಾಲೆಗಳಿಗೆ ಪೋಷಕರು ಭೇಟಿ ನೀಡಿ, ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ವಿಚಾರಿಸಿಕೊಂಡು ಹಿಂತಿರುಗಿದ್ದಾರೆ.

ಮಕ್ಕಳ ಪ್ರವೇಶಾತಿಗಿಂತ ಪೋಷಕರಿಗೆ ಕೋವಿಡ್‌ ಮೂರನೇ ಅಲೆ ಭಯ ಕಾಡುತ್ತಿದೆ. ಮಕ್ಕಳಿಗೆ ಹೆಚ್ಚಿನ ಅಪಾಯ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿರುವುದರಿಂದ ಪೋಷಕರು, ಏನು ಮಾಡಬೇಕು ಎಂಬ ಚಿಂತೆಯಲ್ಲಿದ್ದಾರೆ.

ADVERTISEMENT

‘ಮುಂದಿನ ಪರಿಸ್ಥಿತಿ ನೋಡಿಕೊಂಡು ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಬೇಕೋ ಅಥವಾ ಆಫ್‌ಲೈನ್‌ನಲ್ಲಿ ನಡೆಸಬೇಕೋ ಎನ್ನುವುದರ ಕುರಿತು ತೀರ್ಮಾನಕ್ಕೆ ಬರಲಾಗುವುದು. ಸದ್ಯ ಪ್ರವೇಶ ಪಡೆಯಬೇಕು’ ಎಂದು ಶಾಲಾ ಆಡಳಿತ ಮಂಡಳಿಯವರು ಪೋಷಕರಿಗೆ ಹೇಳುತ್ತಿದ್ದಾರೆ. ಯಾವುದೂ ಸ್ಪಷ್ಟವಿಲ್ಲದ ಕಾರಣ ಸಹಜವಾಗಿಯೇ ಪೋಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

‘ಎರಡು ವರ್ಷಗಳ ಹಿಂದೆ ನನ್ನ ಮಕ್ಕಳಿಗೆ ನರ್ಸರಿಗೆ ಸೇರಿಸಿದ್ದೆ. ಹೋದ ವರ್ಷ ಕೋವಿಡ್‌ ಬಂದರೂ ಮುಂದಿನ ತರಗತಿಗೆ ಪ್ರವೇಶ ಕೊಡಿಸಿದ್ದೆ. ಆದರೆ, ವರ್ಷವಿಡೀ ಶಾಲೆಗಳು ನಡೆಯಲೇ ಇಲ್ಲ. ವಾಟ್ಸ್‌ಆ್ಯಪ್‌ನಲ್ಲೂ ಹೋಂ ವರ್ಕ್‌ ಕೊಡುತ್ತಿದ್ದರು. ಕೆಲವೊಂದು ದಿನ ಆನ್‌ಲೈನ್‌ನಲ್ಲಿ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ನನ್ನ ಮಗಳಿಗೆ ಅದರಿಂದ ಪಾಠಗಳು ಅರ್ಥವಾಗಲಿಲ್ಲ. ಈ ವರ್ಷವೂ ಅದೇ ರೀತಿ ಆದರೆ ಮಕ್ಕಳಿಗೆ ಏನು ಅರ್ಥವಾಗುತ್ತದೆ. ಹಿಂದಿನ ವರ್ಷ ಹೇಗೋ ಪಾಸ್‌ ಮಾಡಿದ್ದಾರೆ. ಆದರೆ, ಈ ವರ್ಷ ಏನು ಮಾಡಬೇಕು ಎನ್ನುವುದನ್ನು ಇನ್ನೂ ನಿರ್ಧರಿಸಿಲ್ಲ’ ಎಂದು ರಾಮಣ್ಣ ಎಂಬುವರು ಹೇಳಿದ್ದಾರೆ.

‘ಮೂರನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಅಪಾಯ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರ ಶಾಲೆಗಳನ್ನು ಆರಂಭಿಸಲು ಬಹಳ ಅವಸರ ತೋರುತ್ತಿದೆ. ಶಾಲೆ ಶುರುವಾದ ನಂತರ ಮಕ್ಕಳಿಗೆ ಏನಾದರೂ ಹೆಚ್ಚು ಕಮ್ಮಿಯಾದರೆ ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಹೊರಗೆ ತಿರುಗಾಡಲು ನಮ್ಮಂತಹ ದೊಡ್ಡವರಿಗೆ ಹೆದರಿಕೆಯಾಗುತ್ತಿದೆ. ಹೀಗಿರುವಾಗ ಏನೂ ಅರಿಯದ ಮಕ್ಕಳನ್ನು ಶಾಲೆಗೆ ಕಳುಹಿಸುವುದಾದರೂ ಹೇಗೆ?’ ಎಂದು ಪ್ರಶ್ನಿಸಿದ್ದಾರೆ.

‘ಕೋವಿಡ್‌ನಿಂದ ಕೆಲಸವಿಲ್ಲದೆ ಮನೆ ನಡೆಸಲು ಸಮಸ್ಯೆಯಾಗುತ್ತಿದೆ. ಇಂತಹದ್ದರಲ್ಲಿ ಶಾಲೆಯಲ್ಲಿ ಪ್ರವೇಶಾತಿ ಆರಂಭವಾಗಿವೆ. ಹಣ ಎಲ್ಲಿಂದ ಹೊಂದಿಸಿಕೊಳ್ಳಬೇಕು. ಸರ್ಕಾರ ಇಂತಹ ಪರಿಸ್ಥಿತಿಯಲ್ಲಿ ಶಾಲಾ ಶುಲ್ಕ ಇಳಿಸಬಹುದಿತ್ತು. ಅದು ಮಾಡಿಲ್ಲ. ಇನ್ನೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿಲ್ಲ. ಹೀಗಿರುವಾಗ ಶಾಲೆ ಆರಂಭಕ್ಕೆ ಸಿದ್ಧತೆ ನಡೆಸುತ್ತಿರುವುದು ಎಷ್ಟು ಸರಿ’ ಎಂದು ರತಿಕಾಂತ ಕೇಳಿದ್ದಾರೆ.

‘ಮಂಗಳವಾರ ಮಕ್ಕಳ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನ ಕೆಲ ಪೋಷಕರು ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಆದರೆ, ಯಾರೂ ಪ್ರವೇಶ ಪಡೆದಿಲ್ಲ. ಬರುವ ದಿನಗಳಲ್ಲಿ ಮಕ್ಕಳ ಪ್ರವೇಶಕ್ಕೆ ಆಸಕ್ತಿ ತೋರಿಸಬಹುದು’ ಎಂದು ಪಟೇಲ್‌ ನಗರದ ನ್ಯಾಷನಲ್‌ ಸ್ಕೂಲ್‌ನ ಪ್ರಾಂಶುಪಾಲ ರುಬೀನಾ ಬೇಗಂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.