ADVERTISEMENT

ಹರಪನಹಳ್ಳಿ: ಬಾಲ್ಯದ ನೆನಪು ಸ್ಮರಿಸಿದ ಸ್ನೇಹ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 4:52 IST
Last Updated 29 ಡಿಸೆಂಬರ್ 2025, 4:52 IST
ಹರಪನಹಳ್ಳಿ ತಾಲ್ಲೂಕು ಗೋವರೆಹಳ್ಳಿ ಗ್ರಾಮದಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು
ಹರಪನಹಳ್ಳಿ ತಾಲ್ಲೂಕು ಗೋವರೆಹಳ್ಳಿ ಗ್ರಾಮದಲ್ಲಿ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅಕ್ಷರ ಕಲಿಸಿದ ಗುರುಗಳನ್ನು ಸನ್ಮಾನಿಸಲಾಯಿತು   

ಹರಪನಹಳ್ಳಿ: ಎಲ್ಲೆಡೆ ತಳಿರು ತೋರಣ, ಕಂಗೊಳಿಸುತ್ತಿದ್ದ ಶಾಲಾವರಣ, ಗ್ರಾಮದಲ್ಲಿ ಹಬ್ಬದ ವಾತಾವರಣ, ಬಾಲ್ಯದ ನೆನಪು ಮೆಲುಕು ಹಾಕುತ್ತಾ ಹರಟೆಯಲ್ಲಿ ತೊಡಗಿದ್ದ ಗೆಳೆಯರು..

ತಾಲ್ಲೂಕಿನ ಗೋವೆರಹಳ್ಳಿ ಗ್ರಾಮದಲ್ಲಿ 1952 ರಿಂದ 1989ರ ವರೆಗಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವಿದ್ಯಾರ್ಥಿ ಸ್ನೇಹಿತರ ಗುರುವಂದನೆ ಮತ್ತು ಸ್ನೇಹ ಸಮ್ಮಿಲನದಲ್ಲಿ ಭಾನುವಾರ ಕಂಡುಬಂದ ದೃಶ್ಯಗಳಿವು.

ಒಂದೊಂದು ವರ್ಷದ ಸಹಪಾಠಿಗಳು ಒಂದೇ ಬಣ್ಣದ ಉಡುಪು ಧರಿಸಿದ್ದರು. ಮೊಬೈಲ್‌ಗಳನ್ನು ಹಿಡಿದು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅವರ ಎತ್ತರ, ತೂಕ ಅಳತೆ ಮಾಡುತ್ತಾ ಸಂಭ್ರಮಿಸುತ್ತಿದ್ದರು. ಎಲ್ಲರೂ ಒಟ್ಟಿಗೆ ಊಟ ಮಾಡಿ ತಮ್ಮ ಸಾಧನೆಯ ತೋರಣಗಳನ್ನು ಜನರೆದುರು ತೆರೆದಿಟ್ಟರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟು, ರಂಜಿಸಿದರು. ತಮಗೆ ಅಕ್ಷರ ಕಲಿಸಿದ್ದ ಎಲ್ಲ ಗುರುಗಳನ್ನು ಆಹ್ವಾನಿಸಿ ಸನ್ಮಾನಿಸಿದರು.

ADVERTISEMENT

ಚಾಲನೆ ನೀಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಮಾತನಾಡಿ, ತಾಲ್ಲೂಕಿಗೆ 6 ಕರ್ನಾಟಕ ಪಬ್ಲಿಕ್ ಶಾಲೆಗಳು ಮುಂಜೂರಾಗಿದ್ದು, ಬರುವ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದರು.

ಕೆಪಿಎಸ್ ಶಾಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ದೊರೆಯುತ್ತದೆ, ನಮ್ಮ ತಾಲ್ಲೂಕಿಗೆ ಹೆಚ್ಚುವರಿಯಾಗಿ ಇನ್ನೂ 2 ಶಾಲೆಗಳು ಮುಂಜೂರಾಗುವ ನಿರೀಕ್ಷೆಯಿದೆ ಎಂದರು.

ಮುಖ್ಯ ಶಿಕ್ಷಕ ಶಿವಾಜಿ, ಕೆ.ಶಿವಾನಂದಪ್ಪ, ಗುಂಡಗತ್ತಿ ಕೊಟ್ರಪ್ಪ ಸೇರಿದಂತೆ ಹಲವು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮುಖಂಡ ಟಪಾಲ್ ಗಣೇಶ್ ಅದ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ಲೇಪಾಕ್ಷಪ್ಪ ಮಾತನಾಡಿದರು.

ಕಲ್ಯಾಣ ಕರ್ನಾಟಕ ಸಾರಿಗೆ ಘಟಕದ ವ್ಯವಸ್ಥಾಪಕಿ ಎಂ.ಮಂಜುಳಾ, ಎ.ಎಸ್.ಐ. ಎನ್.ರಾಜು, ರಾಜೇಂದ್ರ, ಮಡ್ಡಿ ನಾಗರಾಜ್, ಮೃತ್ಯುಂಜಯ, ಕೊಟ್ರೇಶ್, ಸಲೀಂ, ರಾಜೇಂದ್ರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಿತಾ ಯುವರಾಜ್ ನಾಯ್ಕ, ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಎಂ.ರಮೇಶ್, ವೈ.ಕೆಂಚಪ್ಪ, ಟಿ.ಎಂ.ದಯಾನಂದ, ಎಂ.ಬಿ.ಶಿವಾಜಿ, ಡಿ.ರಾಮಣ್ಣ, ಭೋವಿ ಹನುಮಂತಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.