
ಕಂಪ್ಲಿ: ತುಂಗಭದ್ರಾ ಜಲಾಶಯ ವ್ಯಾಪ್ತಿಯ ಬಲದಂಡೆ ಕೆಳಮಟ್ಟದ ಕಾಲುವೆ (ಎಲ್.ಎಲ್.ಸಿ)ಗೆ ಬೇಸಿಗೆ ಹಂಗಾಮು ಭತ್ತ ಬೆಳೆಯಲು ನೀರು ಹರಿಸುವಂತೆ ಪಟ್ಟಣದಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ನಿರ್ಣಯಿಸಲಾಯಿತು.
ಬಳಿಕ ದೇವಸಮುದ್ರ ಗ್ರಾಮದ ರೈತ ಮುಖಂಡ ಅಳ್ಳಳ್ಳಿ ವೀರೇಶ್ ಮಾತನಾಡಿ, 2026ರ ಮಾ.15ರವರೆಗೆ ಕಾಲುವೆಗೆ ನೀರು ಹರಿಸಿದಲ್ಲಿ ‘ಗಂಗಾ ಕಾವೇರಿ’ ತಳಿ ಬೆಳೆಯಲು ಸುಲಭವಾಗಲಿದೆ ಎಂದರು.
ಕೂಡಲೇ ಮುನಿರಾಬಾದಿನಲ್ಲಿ ಐಸಿಸಿ ಸಭೆಯನ್ನು ಕರೆದು ರೈತರೊಂದಿಗೆ ಚರ್ಚಿಸಿ ಎರಡನೇ ಬೆಳೆಗೆ ನೀರೋದಗಿಸುವ ಕುರಿತು ನಿರ್ಧಾರ ಪ್ರಕಟಿಸಿದಲ್ಲಿ ನ.20ರೊಳಗೆ ಭತ್ತದ ಸಸಿ ಬೆಳೆದು ಜ.1ರ ನಂತರ ಸಸಿ ನಾಟಿಗೆ ಅನುಕೂಲವಾಗಿ, ಮಾ.15ರ ನಂತರ ಕೊಯ್ಲಿಗೆ ಬರಲಿದೆ ಎಂದು ವಿವರಿಸಿದರು.
ಜಲಾಶಯದಲ್ಲಿ 80ಟಿಎಂಸಿ ನೀರು ಸಂಗ್ರಹವಿದ್ದು, ಹಿಂಗಾರು ಬೆಳೆಗೆ 30ಟಿಎಂಸಿ ನೀರು ಬಳಕೆಯಾದರೂ ಉಳಿದ 40ಟಿಎಂಸಿ ನೀರು ಇದ್ದಾಗ ತಂತ್ರಜ್ಞರ ಪ್ರಕಾರ ಕ್ರಸ್ಟ್‌ಗೇಟ್ ಅಳವಡಿಸಬಹುದಾಗಿದೆ ಎಂದರು.
ಎರಡನೇ ಬೆಳೆಗೆ ನೀರು ಹರಿಸುವಂತೆ ಒತ್ತಾಯಿಸಿ ನ.7ರಂದು ರೈತರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಕಂಪ್ಲಿ ಕ್ಷೇತ್ರದ ಎಲ್ಲ ರೈತರು ಬೆಂಬಲಿಸುತ್ತೇವೆ ಎಂದು ತಿಳಿಸಿದರು.
ಎರಡನೇ ಬೆಳೆಗೆ ನೀರು ಒದಗಿಸಲು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಶಾಸಕರ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಲಾಗುವುದು. ಶಾಸಕ ಜೆ.ಎನ್. ಗಣೇಶ್ ಸಹ ಎರಡನೇ ಬೆಳೆಗೆ ನೀರೊದಗಿಸುವ ಕುರಿತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಜಲ ಸಂಪನ್ಮೂಲ ಮತ್ತು ಕೃಷಿ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವೊಲಿಸುವುದಾಗಿ ರೈತರಿಗೆ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ರೈತ ಮುಖಂಡರಾದ ಕೆ. ಭಾಸ್ಕರರೆಡ್ಡಿ, ಜಿ. ಮಲ್ಲಿಗೌಡ, ಕಡೇಮನಿ ನಾಗರಾಜ, ಮಾರೇಶ, ಈ. ಶೇಖರಪ್ಪ, ಸಿ.ಡಿ. ಮಹಾದೇವ, ಕಡೇಮನಿ ಪಂಪಾಪತಿ, ಎನ್. ಚಂದ್ರಕಾಂತರೆಡ್ಡಿ, ವೆಂಕಟರಾಮರಾಜು, ಪಿ. ಮೂಕಯ್ಯಸ್ವಾಮಿ, ಎನ್. ರಾಮಾಂಜಿನೇಯಲು, ಡಿ. ಕೃಷ್ಣಂರಾಜು, ಗೋನಾಳ್ ಹೂವಣ್ಣ, ಸತ್ಯನಾರಾಯಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.