
ಬಳ್ಳಾರಿ: ನಗರದಲ್ಲಿ ಬ್ಯಾನರ್ ಅಳವಡಿಕೆ ವಿಚಾರವಾಗಿ ಗುರುವಾರ ರಾತ್ರಿ ಮೊದಲ ಗಲಭೆ ನಡೆಯುತ್ತಲೇ ನಿಷೇಧಾಜ್ಞೆಗೆ ಜಿಲ್ಲಾಡಳಿತ ಆದೇಶಿಸಿತ್ತಾದರೂ, ಅದನ್ನು ಜಾರಿ ಮಾಡಲು ಪೊಲೀಸ್ ಇಲಾಖೆ ಮೀನ ಮೇಷ ಎಣಿಸಿತ್ತು ಎಂಬುದು ಗೊತ್ತಾಗಿದೆ.
ಬಳ್ಳಾರಿಯ ಸಿರುಗುಪ್ಪ ರಸ್ತೆಯ ಅವ್ವಂಬಾವಿಯ ಜನಾರ್ದನ ರೆಡ್ಡಿ ನಿವಾಸದ ಬಳಿ ಮೊದಲ ಹಂತದ ಘರ್ಷಣೆ ಸಂಭವಿಸಿದ ಬಳಿಕ ಸ್ಥಳದಲ್ಲಿ ನಿಷೇಧಾಜ್ಞೆ ಜಾರಿ ಮಾಡುವಂತೆ ಬ್ರೂಸ್‌ಪೇಟೆ ಪೊಲೀಸರು ಬಳ್ಳಾರಿ ತಹಶೀಲ್ದಾರ್‌ಗೆ ಕೂಡಲೇ ಮನವಿ ಸಲ್ಲಿಸಿದ್ದರು. ಕೋರಿಕೆಯಂತೆ ತಹಶೀಲ್ದಾರ್ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಆದೇಶ ಹೊರಡಿಸಿದ್ದರು. ಆದರೆ, ಇದನ್ನು ಆಕ್ಷೇಪಿಸಿದ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು, ಜಾರಿಗೆ ನಿರಾಕರಿಸಿದರು.
‘ನಿಷೇಧಾಜ್ಞೆ ಜಾರಿಯಾಗದಿದ್ದರೆ, ಪ್ರತಿಭಟನೆ ಕುಳಿತಿದ್ದ ಶಾಸಕ ನಾರಾ ಭರತ್ ರೆಡ್ಡಿ ಅವರನ್ನು ಬಲವಂತವಾಗಿಯಾದರೂ ಸ್ಥಳದಿಂದ ಮೇಲೇಳಿಸಬೇಕಾಗಿತ್ತು. ಆದರೆ, ಪೊಲೀಸರು ಮನವೊಲಿಕೆ ತಂತ್ರ ಅನುಸರಿಸಿದರು’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಬ್ಯಾನರ್‌ಗಳು: ಬಳ್ಳಾರಿಯಲ್ಲಿ ಬ್ಯಾನರ್ ಅಳವಡಿಕೆ ಮತ್ತು ತೆರವಿಗೆ ಸಂಬಂಧಿಸಿದಂತೆ ಮೂರು ತಿಂಗಳ ಅಂತರದಲ್ಲಿ ಎರಡು ಬಾರಿ ಗಲಾಟೆಗಳು ನಡೆದಿವೆ. ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಯೊಬ್ಬರು ಅಕ್ರಮ ಬ್ಯಾನರ್ ತೆರವು ಮಾಡಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಒಂದು ಗುಂಪು ನಗರದಲ್ಲಿ ಪ್ರತಿಭಟನೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಅಮಾನತು ಮಾಡಲಾಗಿತ್ತು. ಆದರೆ, ಅಧಿಕಾರಿಯ ಅಮಾನತನ್ನು ಹೈಕೋರ್ಟ್ ಆಕ್ಷೇಪಿಸಿತ್ತು. ಸರ್ಕಾರಕ್ಕೆ ಚೀಮಾರಿ ಹಾಕಿತ್ತು.
ಗುರುವಾರ ಬ್ಯಾನರ್ ಅವಳಡಿಕೆಗೆ ಸಂಬಂಧಿಸಿದಂತೆ ಘರ್ಷಣೆ ನಡೆದಿದ್ದು, ಯುವಕನ ಸಾವಿಗೂ ಕಾರಣವಾಗಿದೆ. ಆದರೂ, ಮಹಾನಗರ ಪಾಲಿಕೆ ಬಳ್ಳಾರಿ ನಗರದಲ್ಲಿ ಅಕ್ರಮ ಬ್ಯಾನರ್‌ಗಳನ್ನು ತೆರವು ಮಾಡಲು ಈವರೆಗೆ ಮುಂದಾಗಿಲ್ಲ. ವಾಲ್ಮೀಕಿ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ರಾಜಕೀಯ ಮುಖಂಡರ ಬ್ಯಾನರ್‌ಗಳನ್ನು ಗಲ್ಲಿಗಲ್ಲಿಗೆ ಅಳವಡಿಸಲಾಗಿದೆ.
ನಗರದ ತುಂಬೆಲ್ಲ ಪೊಲೀಸ್ ವಾಹನ: ಗಲಭೆ ಹಿನ್ನೆಲೆಯಲ್ಲಿ ನಗರದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಹೀಗಾಗಿ ಜಿಲ್ಲೆಯ ಎಲ್ಲ ರಸ್ತೆಗಳಲ್ಲೂ ಪೊಲೀಸ್ ಸಿಬ್ಬಂದಿ, ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಮೀಸಲು ಪೊಲೀಸರನ್ನು ಇರಿಸಲಾಗಿದೆ. ನಗರಕ್ಕೆ ಬಂದಿರುವ ಅಧಿಕಾರಿಗಳ ಸಂಚಾರದಿಂದಾಗಿ ನಗರದಲ್ಲಿ ಎಲ್ಲಿ ನೋಡಿದರೂ ಪೊಲೀಸ್ ಕಾರು, ಜೀಪುಗಳು, ವ್ಯಾನುಗಳೇ ಕಾಣಿಸಿದವು.
ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಮನೆಯ ಬಳಿ ಬಿಗಿ ಭದ್ರತೆ ಒದಗಿಸಲಾಗಿತ್ತು.
ಬಳ್ಳಾರಿಯಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಿತೇಂದ್ರ ಆರ್, ಪೂರ್ವವಲಯ ಐಜಿಪಿ ಬಿ.ಆರ್. ರವಿಕಾಂತೇಗೌಡ, ಈ ಹಿಂದೆ ಬಳ್ಳಾರಿ ಎಸ್‌ಪಿಯಾಗಿದ್ದ ಚಿತ್ರದುರ್ಗದ ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಸೇರಿದಂತೆ ನೆರೆಯ ಮೂರು ಜಿಲ್ಲೆಗಳ ಎಸ್‌ಪಿಗಳು, ಜಿಲ್ಲೆಯ ಇತರ ಠಾಣೆಗಳ ಅಧಿಕಾರಿಗಳು, ಸಿಬ್ಬಂದಿ ಬಳ್ಳಾರಿ ನಗರದಲ್ಲೇ ಮೊಕ್ಕಾಂ ಹೂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.