ADVERTISEMENT

ಹೆಚ್ಚಿದ ವೃದ್ಧಾಶ್ರಮ: ಎಸ್.ಬಿ.ಹಂದ್ರಾಳ್ ವಿಷಾದ

‘ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಯಲಿ’

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2018, 13:15 IST
Last Updated 1 ಅಕ್ಟೋಬರ್ 2018, 13:15 IST
ಹಿರಿಯ ನಾಗರಿಕರಾದ ಜಿ.ಸತ್ಯನಾರಾಯಣ, ನಾಗರತ್ನಮ್ಮ, ಸಾಲಮ್ಮ, ಕರಿಬಸಪ್ಪ, ಸಿಂಧೋಳ ಸಿಂಗಾರಪ್ಪ, ನಾಗಮ್ಮ, ಸಿದ್ದಮ್ಮನಹಳ್ಳಿ ಈರಪ್ಪ, ಟಿ.ಎಚ್.ಎಂ.ಬಸವರಾಜ ಅವರನ್ನು ಗಣ್ಯರು ಸನ್ಮಾನಿಸಿದರು.
ಹಿರಿಯ ನಾಗರಿಕರಾದ ಜಿ.ಸತ್ಯನಾರಾಯಣ, ನಾಗರತ್ನಮ್ಮ, ಸಾಲಮ್ಮ, ಕರಿಬಸಪ್ಪ, ಸಿಂಧೋಳ ಸಿಂಗಾರಪ್ಪ, ನಾಗಮ್ಮ, ಸಿದ್ದಮ್ಮನಹಳ್ಳಿ ಈರಪ್ಪ, ಟಿ.ಎಚ್.ಎಂ.ಬಸವರಾಜ ಅವರನ್ನು ಗಣ್ಯರು ಸನ್ಮಾನಿಸಿದರು.   

ಬಳ್ಳಾರಿ: ‘ಆಧುನಿಕತೆಯ ಭರಾಟೆಯಲ್ಲಿ ಯುವಜನರು ಸಜ್ಜನಿಕೆ ಮರೆತು ಬದುಕು ನಡೆಸುತ್ತಿರುವುದರಿಂದ ವೃದ್ಧಾಶ್ರಮಗಳು ಹೆಚ್ಚಾಗಿವೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಬಿ.ಹಂದ್ರಾಳ್ ವಿಷಾದಿಸಿದರು.

ನಗರದಲ್ಲಿ ಸೋಮವಾರ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಏರ್ಪಡಿಸಿದ್ದ ಹಿರಿಯ ನಾಗರೀಕರ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಹಿರಿಯ ನಾಗರಿಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಶೋಚನೀಯವಾಗಿದೆ. ಹಿರಿಯರನ್ನು ಗೌರವಿಸಿ. ಅವರ ಕೊನೆಯ ಕಾಲದಲ್ಲಿ ಆರೈಕೆ ಮಾಡುವುದು ಮಕ್ಕಳ ಕರ್ತವ್ಯ. ಆದರೆ ಅದನ್ನು ಮರೆತವರೇ ಹೆಚ್ಚು’ ಎಂದರು.

‘50 ವರ್ಷ ದಾಟಿದ ಹಿರಿಯರ ಮನಸ್ಸು ಮಗುವಿನಂತೆ ಇರುತ್ತದೆ. ಆ ಮನಸ್ಸಿಗೆ ನೋವಾಗದ ರೀತಿ ಕ್ಷೇಮವಾಗಿ ನೋಡಿಕೊಳ್ಳಬೇಕು. ಹಿರಿಯರನ್ನು ಕಡೆಗಣಿಸಿದರೆ ಮಕ್ಕಳ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಬಹುದು’ ಎಂದರು.

ADVERTISEMENT

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸಿ.ಭಾರತಿ, ‘ಹಿರಿಯರು ಶಿಸ್ತುಬದ್ಧ ಜೀವನ ನಡೆಸಿ ಆರೋಗ್ಯದಿಂದಿರಬೇಕು’ ಎಂರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗೇಶ್ ಬಿಲ್ವಾ ಮಾತನಾಡಿದರು.

ದಿನಾಚರಣೆ ಅಂಗವಾಗಿ ನಡೆಸಿದ್ದ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಶಾಸಕ ಜಿ.ಸೋಮಶೇಖರರೆಡ್ಡಿ ಬಹುಮಾನ ವಿತರಿಸಿದರು.

ಸಬಲೀಕರಣ ಇಲಾಖೆ ಅಧಿಕಾರಿ ಮಹಾಂತೇಶ್, ಪಾಲಿಕೆ ಸದಸ್ಯ ಮಲ್ಲನಗೌಡ, ಹಿರಿಯ ನಾಗರೀಕ ಉಮಾಪತಿ ಗೌಡ ಇದ್ದರು.

ಹಿರಿಯರಿಗೆ ಸನ್ಮಾನ: ನೂರು ವರ್ಷ ಪೂರೈಸಿರುವ ಸಾಲಮ್ಮ, 101 ವಯಸ್ಸಿನ ಸಿದ್ದಮ್ಮನಹಳ್ಳಿ ಈರಪ್ಪ, 98ರ ವಯಸ್ಸಿನ ಸಿಂಧೋಳ ಸಿಂಗಾರಪ್ಪ (98), 95 ದಾಟಿದ ಬಾದನಹಟ್ಟಿ ಶಹಪುರ ಕರಿಬಸಪ್ಪ, ನಿವೃತ್ತ ಮುಖ್ಯ ಶಿಕ್ಷಕಿ ನಾಗರತ್ನಮ್ಮ ಮತ್ತು ನಾಗಮ್ಮ, 75 ವಯಸ್ಸಿನ ಅಂತಾರಾಷ್ಟ್ರೀಯ ಕ್ರೀಡಾಪಟು ಜಿ.ಸತ್ಯನಾರಾಯಣ, ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾ ಘಟಕ ಅಧ್ಯಕ್ಷ ಟಿ.ಎಚ್.ಎಂ.ಬಸವರಾಜ ಅವರನ್ನು ಗಣ್ಯರು ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.