ADVERTISEMENT

ಸಂಶೋಧನೆಗೆ ಶಂಬಾ ಜೋಶಿ ಕೊಡುಗೆ ಅಪಾರ: ಪದ್ಮಾ ಶೇಖರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 12:55 IST
Last Updated 4 ಜನವರಿ 2020, 12:55 IST
ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಅವರು ಕಾರ್ಯಕ್ರಮ ಉದ್ಘಾಟಿಸಿದರು
ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಅವರು ಕಾರ್ಯಕ್ರಮ ಉದ್ಘಾಟಿಸಿದರು   

ಹೊಸಪೇಟೆ: ‘ಶಂಬಾ ಜೋಶಿಯವರ ಸಂಶೋಧನೆ ಆಳ ಹಾಗೂ ಬಹುಮುಖವಾದುದು. ಜತೆಗೆ ವಿಶಿಷ್ಟ ಆಲೋಚನಾ ಕ್ರಮ ಒಳಗೊಂಡಿತ್ತು’ ಎಂದು ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್‌ ಹೇಳಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶನಿವಾರ ಶಂಬಾ ಜೋಶಿಯವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಪಿಎಚ್‌.ಡಿ. ಕೋರ್ಸ್‌ ವರ್ಕ್‌ ಉದ್ಘಾಟಿಸಿ ಅವರು ಮಾತನಾಡಿದರು.

‘ಜೋಶಿಯವರು ಯಾವುದನ್ನೂ ವೈಭವೀಕರಿಸದೇ, ಅನ್ವೇಷಣೆಗೆ ವರ್ತಮಾನವನ್ನು ಮುಖಾಮುಖಿಯಾಗಿ ಚರ್ಚಿಸುತ್ತಿದ್ದರು. ಸಂಶೋಧನಾ ಕ್ಷೇತ್ರದಲ್ಲಿ ಅಪಾರ ಕೆಲಸ ಮಾಡಿದ ಅವರು ನನ್ನದು ಅಳಿಲು ಸೇವೆ ಎನ್ನುತ್ತಿದ್ದರು. ಅವರೊಬ್ಬ ನಿರ್ಲಿಪ್ತ ಸಾಧಕರಾಗಿದ್ದರು’ ಎಂದರು.

ADVERTISEMENT

‘ಕನ್ನಡ ಸಂಶೋಧನಾ ಕ್ಷೇತ್ರ ಅಶ್ವಥವೃಕ್ಷ. ಸಂಶೋಧನೆಯು ಸತ್ಯದ ಹುಡುಕಾಟವಾಗಿದೆ. ಸಂಶೋಧನೆಗೆ ಪಾಂಡಿತ್ಯ, ಪ್ರತಿಭೆಯ ಜೊತೆಗೆ ಸೃಜನಶೀಲತೆ ಬೇಕು. ಸಂಶೋಧನೆಯಲ್ಲಿ ಅಂಧಾನುಕರಣೆ ಬೇಡ. ವಿಮರ್ಶೆ ಮತ್ತು ತಾರ್ಕಿಕತೆ ಅಂಶ ಒಳಗೊಂಡಿರಬೇಕು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಸ.ಚಿ. ರಮೇಶ, ‘ಜೋಶಿಯವರು ಸಂಶೋಧನೆಗೆ ಜೀವನವನ್ನೇ ಮುಡುಪಾಗಿಟ್ಟವರು. ಅವರದು ಏಕಶಿಸ್ತೀಯ ಅಧ್ಯಯನವಾಗಿರಲಿಲ್ಲ’ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕ ರಾಜಾರಾಮ ಹೆಗಡೆ, ‘ಸಂಶೋಧನ ಎಂದರೆ ಹೊಸತನದ ಹುಡುಕಾಟ. ಅದು ಆಳವಾಗಿ, ಸಮಾಜ ಮುಖಿಯಾಗಿ ನಡೆಯಬೇಕು’ ಎಂದು ತಿಳಿಸಿದರು.

‘ಜೋಶಿಯವರು ಸಂಶೋಧನಯಲ್ಲಿ ಕಷ್ಟ ಸಹಿಷ್ಣರು. ಭಿನ್ನ ಆಲೋಚನೆ ಹೊಂದಿದ್ದರು’ ಎಂದು ವಿಶ್ರಾಂತ ಪ್ರಾಧ್ಯಾಪಕ ಜಿ.ಎಸ್.ಮರಿಗುದ್ದಿ ಹೇಳಿದರು.

ಶಂಬಾ ಜೋಶಿ ಅಧ್ಯಯನ ಪೀಠದ ಸಂಚಾಲಕ ವಿರೂಪಾಕ್ಷಿ ಪೂಜಾರಹಳ್ಳಿ, ಅಧ್ಯಯನಾಂಗದ ನಿರ್ದೇಶಕ ಹೆಬ್ಬಾಲೆ ಕೆ.ನಾಗೇಶ್, ಶೈಕ್ಷಣಿಕ ಉಪಕುಲಸಚಿವ ಎಸ್.ವೈ. ಸೋಮಶೇಖರ್, ಸಂಶೋಧನಾ ವಿದ್ಯಾರ್ಥಿನಿ ನಿರ್ಮಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.