
ಬಳ್ಳಾರಿ: ಬಳ್ಳಾರಿಯಲ್ಲಿ ಜನವರಿ 1ರಂದು ನಡೆದಿದ್ದ ದೊಂಬಿಯಲ್ಲಿ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ ಮರಣೋತ್ತರ ಪರೀಕ್ಷೆ ವರದಿಯು ಬಹಿರಂಗವಾಗಿದ್ದು, ತುಂಬಾ ಸಮೀಪದಿಂದಲೇ ಗುಂಡು ಹಾರಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಗುಂಡು ಎದೆಗೆ ನಾಟಿದ್ದರಿಂದ ಆದ ಗಾಯ, ಆಘಾತ ಮತ್ತು ತೀವ್ರರಕ್ತಸ್ರಾವದಿಂದ ಸಾವು ಸಂಭವಿಸಿದೆ. ದೇಹದಲ್ಲಿ 1.8 ಸೆಂ.ಮೀ ಅಗಲ ಮತ್ತು 2.5 ಸೆಂ.ಮೀ ಉದ್ದದ ಬೂದಿ ಬಣ್ಣದ, ವಿರೂಪಗೊಂಡ ಪ್ಲಾಸ್ಟಿಕ್ ‘ವ್ಯಾಡ್ ಕಪ್’, ಅದರ ಒಂದು ತುಂಡು ಮತ್ತು ರಕ್ತದ ಕಲೆಯುಳ್ಳ ವಿರೂಪಗೊಂಡ 17 ಪೆಲೆಟ್‌ಗಳು (ಸಣ್ಣ ಗುಂಡು) ಪತ್ತೆಯಾಗಿವೆ’ ಎಂದು ವರದಿ ಹೇಳಿದೆ.
ನಗರಕ್ಕೆ ಮಂಗಳವಾರ ಭೇಟಿ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಒಮ್ಮೆ ಮಾತ್ರ ಮರಣೋತ್ತರ ಪರೀಕ್ಷೆ ನಡೆದಿದೆ. ಕೆಲ ಮುಖಂಡರು ಸುಳ್ಳುಹೇಳುವುದನ್ನು ರೂಢಿಸಿಕೊಂಡಿದ್ದಾರೆ’ ಎಂದರು.
ಮಾಜಿ ಸಚಿವ ಶ್ರೀರಾಮುಲು ಮಾತನಾಡಿ, ‘ರಾಜಶೇಖರ ಅಂತ್ಯಕ್ರಿಯೆ ಪ್ರಕ್ರಿಯೆ ಬಗ್ಗೆ ಅನುಮಾನವಿದೆ. ಕುಟುಂಬಸ್ಥರನ್ನು ಬೆದರಿಸಿ, ಈ ಕಾರ್ಯ ನೆರವೇರಿಸಲಾಗಿದೆ’ ಎಂದು ದೂರಿದರು. ಎಎಸ್ಪಿ ರವಿಕುಮಾರ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.