ADVERTISEMENT

ವಿಜಯನಗರದಲ್ಲಿ ಆರಂಭವಾಗಲಿವೆ ‘ನಮ್ಮ ಕ್ಲಿನಿಕ್‌’

ದೆಹಲಿಯ ಎಎಪಿ ಸರ್ಕಾರದ ಮಾದರಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ನಮ್ಮ ಕ್ಲಿನಿಕ್‌’

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2022, 19:30 IST
Last Updated 1 ಡಿಸೆಂಬರ್ 2022, 19:30 IST
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ‘ನಮ್ಮ ಕ್ಲಿನಿಕ್‌’ಗೆ ಅಂತಿಮ ಸ್ಪರ್ಶ ಕೊಡಲಾಗುತ್ತಿದೆ
ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ‘ನಮ್ಮ ಕ್ಲಿನಿಕ್‌’ಗೆ ಅಂತಿಮ ಸ್ಪರ್ಶ ಕೊಡಲಾಗುತ್ತಿದೆ   

ಹೊಸಪೇಟೆ (ವಿಜಯನಗರ): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ‘ಆಮ್‌ ಆದ್ಮಿ’ ಪಕ್ಷ (ಎಎಪಿ) ನಿರ್ಮಿಸಿರುವ ಮಾದರಿಯಲ್ಲೇ ರಾಜ್ಯ ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಿಸಲು ಮುಂದಾಗಿದೆ.

ನವದೆಹಲಿಯಲ್ಲಿ ಎಎಪಿ ಸರ್ಕಾರ ಆರಂಭಿಸಿರುವ ‘ಮೊಹಲ್ಲಾ ಕ್ಲಿನಿಕ್‌’ ಭಾರಿ ಜನಪ್ರಿಯತೆ ಗಳಿಸಿದೆ. ವಿಧಾನಸಭೆಯ ಚುನಾವಣೆ ಹೊಸ್ತಿಲಲ್ಲಿ ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸರ್ಕಾರ ‘ನಮ್ಮ ಕ್ಲಿನಿಕ್‌’ ಆರಂಭಿಸಲು ತೀರ್ಮಾನಿಸಿದ್ದು, ಈಗಾಗಲೇ ಈ ನಿಟ್ಟಿನಲ್ಲಿ ಭರದ ಕೆಲಸಗಳು ಆರಂಭವಾಗಿವೆ.

ನೂತನ ವಿಜಯನಗರ ಜಿಲ್ಲೆಗೆ ರಾಜ್ಯ ಸರ್ಕಾರವು ಒಟ್ಟು ಆರು ‘ನಮ್ಮ ಕ್ಲಿನಿಕ್‌’ಗಳನ್ನು ಮಂಜೂರು ಮಾಡಿದೆ. ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿ ಎರಡು, ಕೂಡ್ಲಿಗಿ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ ಹಾಗೂ ಕೊಟ್ಟೂರು ತಾಲ್ಲೂಕಿನಲ್ಲಿ ತಲಾ ಒಂದೊಂದು ‘ನಮ್ಮ ಕ್ಲಿನಿಕ್‌’ ಆರಂಭಿಸಲು ನಿರ್ಧರಿಸಲಾಗಿದೆ. ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ, ಕಮಲಾಪುರದಲ್ಲಿ ತಲಾ ಒಂದು ಕ್ಲಿನಿಕ್‌ ಆರಂಭವಾಗಲಿದೆ.

ADVERTISEMENT

ಜಿಲ್ಲೆಯ ಕೊಟ್ಟೂರಿನಲ್ಲಿ ಬಾಡಿಗೆ ಮೇಲೆ ಪಡೆದ ಸ್ಥಳ ಸೂಕ್ತವಾಗಿರದ ಕಾರಣ ಅಲ್ಲಿ ಕೆಲಸ ಆರಂಭವಾಗಿಲ್ಲ. ಹೊಸ ಜಾಗಕ್ಕೆ ಹುಡುಕಾಟ ನಡೆದಿದೆ. ಇನ್ನುಳಿದಂತೆ ಉಳಿದ ಕಡೆಗಳಲ್ಲಿ ಸರ್ಕಾರಕ್ಕೆ ಸೇರಿದ ಕಟ್ಟಡಗಳಲ್ಲಿ ‘ನಮ್ಮ ಕ್ಲಿನಿಕ್‌’ಗೆ ಅಂತಿಮ ಸ್ಪರ್ಶ ಕೊಡಲಾಗುತ್ತಿದೆ. ಸುಣ್ಣ, ಬಣ್ಣ ಬಳಿಯುವ ಕೆಲಸ ಪ್ರಗತಿಯಲ್ಲಿದ್ದು, ಸಣ್ಣಪುಟ್ಟ ಕೆಲಸ ನಡೆಯುತ್ತಿದೆ.

ಏನೇನು ಸೌಕರ್ಯ ಸಿಗಲಿದೆ:ಅಂದಹಾಗೆ, ‘ನಮ್ಮ ಕ್ಲಿನಿಕ್‌’ನಲ್ಲಿ ಏನೇನು ಸೌಲಭ್ಯಗಳು ಸಿಗಲಿವೆ? ಈಗಾಗಲೇ ಎಲ್ಲ ಹೋಬಳಿ, ತಾಲ್ಲೂಕು ಕೇಂದ್ರಗಳಲ್ಲಿ ಆರೋಗ್ಯ ಕೇಂದ್ರಗಳಿವೆ. ಹೀಗಿದ್ದರೂ ಸರ್ಕಾರ ಹೆಚ್ಚುವರಿಯಾಗಿ ‘ನಮ್ಮ ಕ್ಲಿನಿಕ್‌’ ಸ್ಥಾಪಿಸಲು ಮುಂದಾಗಿದೆ. ಈಗಿರುವ ಆರೋಗ್ಯ ಕೇಂದ್ರಗಳ ಮೇಲಿನ ಒತ್ತಡ ತಗ್ಗಿಸುವುದು, ಜನರಿಗೆ ಅವರು ವಾಸವಾಗಿರುವ ಸ್ಥಳದ ಸಮೀಪದಲ್ಲೇ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿದೆ.

ಎಲ್ಲ ಕ್ಲಿನಿಕ್‌ಗಳಲ್ಲಿ ಒಬ್ಬ ವೈದ್ಯರು, ಸ್ಟಾಫ್‌ ನರ್ಸ್‌, ಲ್ಯಾಬ್‌ ಟೆಕ್ನಿಶಿಯನ್‌ ಇರುತ್ತಾರೆ. ಎಲ್ಲ ರೀತಿಯ ಪರೀಕ್ಷೆಗಳಿಗೆ ವ್ಯವಸ್ಥೆ, ಔಷಧಿ ಸೌಲಭ್ಯ ಇರುತ್ತದೆ. ಎಲ್ಲ ಪ್ರಕಾರದ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ಸೌಕರ್ಯವೂ ಇರುತ್ತದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.