ADVERTISEMENT

ಕುಮಾರಸ್ವಾಮಿ ಗುಡಿಯಲ್ಲಿ ವಿಶೇಷ ಪೂಜೆಗೆ ಸಿದ್ಧತೆ

ಶ್ರಾವಣ ಮಾಸದ ಮೂರನೇ ಸೋಮವಾರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 12:49 IST
Last Updated 17 ಆಗಸ್ಟ್ 2019, 12:49 IST
ಕುಮಾರಸ್ವಾಮಿ ಗುಡಿ
ಕುಮಾರಸ್ವಾಮಿ ಗುಡಿ   

ಸಂಡೂರು: ತಾಲ್ಲೂಕಿನ ಲೋಹಾದ್ರಿ ಗಿರಿಯ ತಪ್ಪಲಿನಲ್ಲಿ ನೆಲೆನಿಂತು ಭಕ್ತರನ್ನು ಪೊರೆಯುತ್ತಿರುವ ಶ್ರೀಕುಮಾರಸ್ವಾಮಿಯ ದರ್ಶನಕ್ಕೆ ಮೂರನೆ ಶ್ರಾವಣ ಸೋಮವಾರ ಭಕ್ತ ಸಾಗರ ಹರಿದು ಬರಲಿದೆ.

ಪುರಾಣ ಪ್ರಸಿದ್ಧ ದೇವಸ್ಥಾನವು ಸಂಡೂರಿನಿಂದ 12 ಕಿ.ಮೀ ದೂರದ ಸ್ವಾಮಿಮಲೈ ಅರಣ್ಯ ಪ್ರದೇಶದಲ್ಲಿದೆ. ಸಂಡೂರು, ಲಕ್ಷ್ಮೀಪುರ (ಚಿಕ್ಕಸಂಡೂರು), ನಂದಿಹಳ್ಳಿ ಮಾರ್ಗವಾಗಿ ಸಾಗುವ ಮಾರ್ಗದ ಇಕ್ಕೆಲದ ಹಸಿರುಟ್ಟ ಗುಡ್ಡ ಬೆಟ್ಟಗಳು, ಜಮೀನುಗಳಲ್ಲಿ ಚಿಗುರೊಡೆದ ವಿವಿಧ ಬೆಳೆಗಳು, ಬೆಟ್ಟದಲ್ಲಿನ ತಿರುವುಗಳು ಆಸ್ತಿಕರನ್ನು ಹಾಗೂ ಪ್ರಕೃತಿ ಪ್ರಿಯರನ್ನು ಆಕರ್ಷಿಸುತ್ತವೆ.

ದೇವಸ್ಥಾನದ ಪ್ರಾಂಗಣದಲ್ಲಿ ಶ್ರೀಪಾರ್ವತಿ, ನಾಗನಾಥೇಶ್ವರ ದೇವಸ್ಥಾನವಿದೆ. ಶ್ರೀಕುಮಾರಸ್ವಾಮಿ ಮತ್ತು ಪಾರ್ವತಿ ದೇವಸ್ಥಾನದ ನಡುವೆ ಅಭಿವೃದ್ಧಿಪಡಿಸಿರುವ ಗುಲಾಬಿ ಕೈತೋಟ ದೇವಸ್ಥಾನಕ್ಕೆ ಮೆರಗು ನೀಡುತ್ತಿದೆ. ಸುತ್ತಲಿನ ತಂಪು ವಾತಾವರಣ ಬೆಟ್ಟಕ್ಕೆ ಬರುವ ಜನತೆಗೆ ಮುದ ನೀಡುತ್ತದೆ.

ADVERTISEMENT

ಬಹುತೇಕ ಭಕ್ತರು ಮಾರ್ಗಮಧ್ಯದ ಶ್ರೀಹರಿಶಂಕರ ಗುಡಿಗೆ ಬಂದು ನಂತರ ಬಸವಣ್ಣನ ಬಾಯಿಯಿಂದ ಧುಮ್ಮಿಕ್ಕುವ ನೀರಿನಿಂದ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಾರೆ. ಬಾಟಲಿ, ಕ್ಯಾನ್‍ಗಳಲ್ಲಿ ತುಂಬಿಸಿಕೊಳ್ಳುತ್ತಾರೆ.

‘ಮೂರನೆ ಶ್ರಾವಣ ಸೋಮವಾರ ಬೆಳಿಗ್ಗೆ 5.30 ರಿಂದ ಶ್ರೀಕುಮಾರಸ್ವಾಮಿಗೆ ಪಂಚಾಮೃತ ಹಾಗೂ ರುದ್ರಾಭಿಷೇಕ ಮಾಡಲಾಗುವುದು. 9 ಗಂಟೆಯಿಂದ ಅಲಂಕಾರ, ದರ್ಶನ, ರಾತ್ರಿ 8 ಗಂಟೆಗೆ ಪಲ್ಲಕ್ಕಿ ಸೇವೆ ನಡೆಯಲಿದೆ. ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಸಂಡೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ’ ಎಂದು ಅರ್ಚಕ ಸೂರ್ಯನಾರಾಯಣಭಟ್ ಹಾಗೂ ವ್ಯವಸ್ಥಾಪಕ ಶಿವಾಜಿ ಭಟ್ ’ಪ್ರಜಾವಾಣಿ’ಗೆ ತಿಳಿಸಿದರು.

‘ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ’ ಎಂದು ಸಂಡೂರು ಬಸ್ ಘಟಕದ ವ್ಯವಸ್ಥಾಪಕ ವೆಂಕಟೇಶ್ ತಿಳಿಸಿದರು. ‘ದೇವಸ್ಥಾನದ ಮಾರ್ಗದಲ್ಲಿ ಅದಿರು ಲಾರಿಗಳ ಸಂಚಾರವನ್ನು ನಿರ್ಬಂಧಿಸಲಾಗುವುದು’ ಎಂದು ಸಬ್‍ಇನ್‍ಸ್ಪೆಕ್ಟರ್ಅಶೋಕ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.