ಬಳ್ಳಾರಿ: ಜಿಲ್ಲೆಯಲ್ಲಿ ಹಲವು ಕಡೆ ಮತಗಟ್ಟೆ ಸಿಬ್ಬಂದಿ ಮತ್ತು ಅಧಿಕಾರಿಗಳು ಮಂಗಳವಾರ ಅಸ್ವಸ್ಥಗೊಂಡರು. ಅವರಿಗೆ ಕೂಡಲೇ ಚಿಕಿತ್ಸೆ ಒದಗಿಸಲಾಯಿತು.
ಕುಡಿತಿನಿ ಗ್ರಾಮದ ಮತದಾನ ಕೇಂದ್ರವೊಂದರ ಸಿಬ್ಬಂದಿ ರವಿಚಂದ್ರ ಎಂಬುವವರು ರಕ್ತದೊತ್ತಡ ಸಮಸ್ಯೆಯಿಂದ ಅಸ್ವಸ್ಥಗೊಂಡರು. ಅವರನ್ನು ಆಂಬುಲೆನ್ಸ್ ಮೂಲಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿಕೊಡಲಾಯಿತು. ವೈದ್ಯ ಡಾ. ಗೋಪಾಲರಾವ್ ಚಿಕಿತ್ಸೆ ನೀಡಿದರು.
ಬಳ್ಳಾರಿ ತಾಲ್ಲೂಕಿನ ಕೊಳಗಲ್ ಗ್ರಾಮದ ಮತದಾನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಲಕ್ಷ್ಮೀದೇವಿ ಎಂಬುವವರು ರಕ್ತದೊತ್ತಡ ಕಡಿಮೆಯಾಗಿ ಪ್ರಜ್ಞಾಹೀನರಾದರು. ತಕ್ಷಣವೇ ಎಚ್ಚೆತ್ತ ಮತಗಟ್ಟೆ ಸಿಬ್ಬಂದಿ ಅವರನ್ನು ಆಂಬ್ಯುಲೆನ್ಸ್ ಮೂಲಕ ವಿಮ್ಸ್‌ಗೆ ದಾಖಲಿಸಿ, ಚಿಕಿತ್ಸೆ ಕೊಡಿಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಅಬ್ದುಲ್ಲಾ, ಸಿದ್ದಮ್ಮನಹಳ್ಳಿ ವೈದ್ಯಾಧಿಕಾರಿ ಡಾ. ದಿವ್ಯಾ ಅವರು ನಿಗಾ ವಹಿಸಿ ಆರೈಕೆ ಮಾಡಿದರು.
ಬಂಡಿಹಟ್ಟಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಗೋಡೆವಾಲ)ಯ ಮತದಾನ ಕೇಂದ್ರದ ಮತಗಟ್ಟೆ ಅಧಿಕಾರಿ ಶೋಭಾರಾಣಿ ಅವರು ಅಸ್ವಸ್ಥಗೊಂಡು ಪ್ರಜ್ಞಾಹೀನರಾಗಿ ಕುಸಿದು ಬಿದ್ದರು. ಬಂಡಿಹಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ತಂಡ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ವಿಮ್ಸ್‌ಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಒದಗಿಸಿದರು. ಶೋಭಾರಾಣಿ ಸದ್ಯ ಗುಣಮುಖರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.