ADVERTISEMENT

ಎಂ.ಪಿ.ರವೀಂದ್ರ ಅಕಾಲಿಕ ನಿಧನ: ಮೌನಕ್ಕೆ ಜಾರಿದ ಮಲ್ಲಿಗೆ ನಾಡು

ಕಳಚಿತು ಮ.ಮ.ಪಾಟೀಲರ ಜನಸೇವಾ ರಾಜಕಾರಣದ ಕೊನೆಯ ಕೊಂಡಿ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2018, 12:00 IST
Last Updated 3 ನವೆಂಬರ್ 2018, 12:00 IST
ಹೂವಿನಹಡಗಲಿಯಲ್ಲಿ ಕುಟುಂಬದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈ ಮರೆತ ಎಂ.ಪಿ.ರವೀಂದ್ರ
ಹೂವಿನಹಡಗಲಿಯಲ್ಲಿ ಕುಟುಂಬದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈ ಮರೆತ ಎಂ.ಪಿ.ರವೀಂದ್ರ   

ಹೂವಿನಹಡಗಲಿ: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶರ ಏಕೈಕ ಪುತ್ರ, ಮಾಜಿ ಶಾಸಕ ಎಂ.ಪಿ.ರವೀಂದ್ರ ಅಕಾಲಿಕ ನಿಧನರಾರಾಗಿದ್ದು, ಅವರ ಹುಟ್ಟೂರು ಮಲ್ಲಿಗೆ ನಗರಿ ಹೂವಿನಹಡಗಲಿಯಲ್ಲಿ ನೀರವ ಮೌನ ಆವರಿಸಿದೆ.

ಮುತ್ಸದ್ದಿ ರಾಜಕಾರಣಿ ಎಂ.ಪಿ.ಪ್ರಕಾಶ್ ಅವರು ದಶಕಗಳ ಕಾಲ ಮಲ್ಲಿಗೆ ನಾಡಿನಲ್ಲಿ ಪ್ರಕಾಶಮಾನವಾಗಿ ಬೆಳಗಿದವರು. ತಂದೆಯ ರಾಜಕಾರಣಕ್ಕೆ ಬೆನ್ನುಲುಬಾಗಿ ನಿಂತಿರುತ್ತಿದ್ದ ಎಂ.ಪಿ.ರವೀಂದ್ರ ತಮ್ಮದೇ ಆದ ವಿಶಿಷ್ಟ ವ್ಯಕ್ತಿತ್ವ ರೂಪಿಸಿಕೊಂಡಿದ್ದರು. ಬರೀ ತಂದೆಯ ರಾಜಕಾರಣಕ್ಕೆ ಮಾತ್ರ ವಾರಸುದಾರರಾಗದೇ  ಅವರ ಸಾಹಿತ್ಯ, ಸಂಸ್ಕೃತಿ, ರಂಗಭೂಮಿಯ ಅಭಿರುಚಿಗಳನ್ನು ಬೆಳೆಸಿಕೊಂಡು ಹೋಗುವ ಸಾಂಸ್ಕೃತಿಕ ಕಾಳಜಿಯೂ ಅವರಲ್ಲಿ ಇತ್ತು. ಮಲ್ಲಿಗೆ ನಾಡಿನ ಭರವಸೆಯ ಬೆಳಕಾಗಿ ರೂಪುಗೊಂಡಿದ್ದ ಎಂ.ಪಿ.ರವೀಂದ್ರ ಇದೀಗ ಮರಳಿ ಬಾರದ ಲೋಕಕ್ಕೆ ತೆರಳಿರುವುದನ್ನು ಅವರ ಒಡನಾಡಿಗಳಿಗೆ ಕಲ್ಪಿಸಿಕೊಳ್ಳಲು ಆಗುತ್ತಿಲ್ಲ.

ಎಂ.ಪಿ.ರವೀಂದ್ರ ಬಾಲ್ಯದ ದಿನಗಳನ್ನು ಕಳೆದಿದ್ದ ಹೂವಿನಹಡಗಲಿಯ ಅಕ್ಕಿಪೇಟೆ ಈಗ ಭಣಗುಡುತ್ತಿದೆ. ರಾಜಕೀಯವಾಗಿ ಎಷ್ಟೇ ಎತ್ತರಕ್ಕೆ ಏರಿದರೂ ತನ್ನೊಂದಿಗೆ ಚಿಣ್ಣಿದಾಂಡು, ಗೋಲಿ, ಮರಕೋತಿ ಆಡಿದ ಗೆಳೆಯರನ್ನು ಅದೇ ಸಲುಗೆಯಿಂದ ಮಾತಿಗೆ ಎಳೆಯುತ್ತಿದ್ದರು. ನೊಂದವರಿಗಾಗಿ ಮಿಡಿಯುತ್ತಿದ್ದ ರವೀಂದ್ರ ತಾಲ್ಲೂಕಿನ ಜನರ ಪಾಲಿಗೆ ‘ರವಿಯಣ್ಣ’ ನಾಗಿಯೇ ಉಳಿದಿದ್ದರು.

ADVERTISEMENT

ಹೂವಿನಹಡಗಲಿಯ ಅಕ್ಕಿಪೇಟೆಯಲ್ಲಿರುವ ಎಸ್‌.ವಿ.ಜಿ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮೈಸೂರಿನ ಸುತ್ತೂರು ಮಠ, ಹಗರಿಬೊಮ್ಮನಹಳ್ಳಿಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ಪ್ರೌಢ ಶಿಕ್ಷಣ ಪಡೆದಿದ್ದರು. ಪಿಯುಸಿ ಮತ್ತು ಎಂಜಿನಿಯರಿಂಗ್ ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದರು. 1994ರ ಸಾರ್ವತ್ರಿಕ ಚುನಾವಣೆಯಲ್ಲಿ ತಂದೆಯ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ, ಸಾರ್ವಜನಿಕ ಜೀವನಕ್ಕೆ ಕಾಲಿರಿಸಿದ್ದರು. ಕ್ರೀಡೆ, ರಂಗಭೂಮಿ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ಸಂಘಟಿಸಿ, ತಮ್ಮದೇ ಆದ ಯುವಪಡೆಯನ್ನು ಸಜ್ಜುಗೊಳಿಸಿದ್ದರು.

ಸಹಕಾರಿ ರಂಗದ ಧ್ರುವತಾರೆ:2000ನೇ ಸಾಲಿನಲ್ಲಿ ರವೀಂದ್ರ ಹಡಗಲಿ ಅರ್ಬನ್ ಬ್ಯಾಂಕ್‌ ಅಧ್ಯಕ್ಷರಾಗಿ ಸಕ್ರಿಯ ರಾಜಕಾರಣಕ್ಕೆ ಪದಾರ್ಪಣೆ ಮಾಡಿದ್ದರು. 2003ರಿಂದ ಸತತ ನಾಲ್ಕು ಬಾರಿ ಬಿ.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕರಾಗಿ, 2005ರಿಂದ ಇಲ್ಲಿಯವರೆಗೂ ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ ಅಪೆಕ್ಸ್‌ ಬ್ಯಾಂಕ್‌ನ ‘ಡಿ’ ವಲಯದಲ್ಲಿದ್ದ ಬ್ಯಾಂಕ್‌ನ್ನು ‘ಎ’ ವಲಯಕ್ಕೆ ಸೇರ್ಪಡೆಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಬ್ಯಾಂಕ್‌ ಅಧೀನದಲ್ಲಿರುವ ಜಿಲ್ಲೆಯ ಎಲ್ಲ ಕೃಷಿ ಪತ್ತಿನ ಸಹಕಾರಿಗಳನ್ನು ಗಣಕೀಕರಣಗೊಳಿಸಿದ್ದಾರೆ. ಸುದೀರ್ಘ ಕಾಲ ಬಿ.ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿರುವ ರವೀಂದ್ರ ಸಹಕಾರಿ ರಂಗದ ಧ್ರುವತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2011 ರಿಂದ 2013ರವರೆಗೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2013ರಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ, ಹಿಂದೆ ಇದೇ ಕ್ಷೇತ್ರದಲ್ಲಿ ಅವರ ತಂದೆ ಎಂ.ಪಿ.ಪ್ರಕಾಶರ ಸೋಲಿನ ಸೇಡನ್ನು ತೀರಿಸಿಕೊಂಡಿದ್ದರು.

ಜಿಲ್ಲಾ ಪುನರ್ ವಿಂಗಡಣೆ ಸಂದರ್ಭದಲ್ಲಿ ಬಳ್ಳಾರಿಯಿಂದ ಬೇರ್ಪಟ್ಟು ದಾವಣಗೆರೆ ಜಿಲ್ಲೆಗೆ ಸೇರ್ಪಡೆಯಾಗಿದ್ದ ಹರಪನಹಳ್ಳಿ ತಾಲ್ಲೂಕನ್ನು ಪುನಃ ಬಳ್ಳಾರಿಗೆ ಸೇರ್ಪಡೆಗೊಳಿಸಿ 371 (ಜೆ) ಸೌಲಭ್ಯಗಳನ್ನು ದೊರಕಿಸಿಕೊಡುವಲ್ಲಿ ರವೀಂದ್ರರ ಪರಿಶ್ರಮ ಅಪಾರವಾಗಿದೆ. ಇತ್ತೀಚಿನ ರಾಜಕೀಯ ಮೇಲಾಟಗಳಿಂದ ಬೇಸತ್ತಿದ್ದ ರವೀಂದ್ರ ಚುನಾವಣಾ ರಾಜಕೀಯಕ್ಕೆ ನಿವೃತ್ತಿಯನ್ನೂ ಘೋಷಿಸಿದ್ದರು. ಸ್ವತಃ ಸಿದ್ದರಾಮಯ್ಯ ಮನವೋಲಿಸಿದ್ದರಿಂದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.