
ಹೂವಿನಹಡಗಲಿ: ಪಟ್ಟಣದಲ್ಲಿ ಭಾನುವಾರ ತ್ಯಾಗವೀರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತೇರು ಹನುಮಪ್ಪ ದೇವಸ್ಥಾನದಿಂದ ಮುಖ್ಯ ಬೀದಿಗಳ ಮೂಲಕ ಮದಲಗಟ್ಟಿ ವೃತ್ತದ ಕೆ.ಎನ್.ಶಾಲೆಯವರೆಗೆ ಲಿಂಗರಾಜರ ಭಾವಚಿತ್ರ ಮೆರವಣಿಗೆ ಭವ್ಯವಾಗಿ ಜರುಗಿತು. ಸಮಾಳ, ನಂದಿಕೋಲು, ಮಂಗಳವಾದ್ಯ ಮೆರಗು ಹೆಚ್ಚಿಸಿದ್ದವು. ಮಹಿಳೆಯರು ಕಳಸದೊಂದಿಗೆ ಭಾಗವಹಿಸಿದ್ದರು.
ಕೆ.ಎನ್.ಶಾಲೆ ಆವರಣದಲ್ಲಿ ಆಯೋಜಿಸಿದ್ದ ಜಯಂತ್ಯೋತ್ಸವಕ್ಕೆ ಲಿಂಗಾಯತ ಕುಡುವಕ್ಕಲಿಗ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಬಿ.ಬಿ.ಪಾಟೀಲ ಶೇಗುಣಿಸಿ ಚಾಲನೆ ನೀಡಿ, ‘ಸಿರಸಂಗಿ ಲಿಂಗರಾಜರ ಕೊಡುಗೆಯಿಂದ ಸ್ಥಾಪನೆಯಾಗಿದ್ದ ಲಿಂಗಾಯತ ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮೆರವಾಗಿ ಬೆಳೆದಿವೆ. ಮಹನೀಯರ ಕೊಡುಗೆಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕು. ಕುಡುವಕ್ಕಲಿಗ ಸಮಾಜದವರು ಸಂಘಟಿತರಾಗಿ ಅಭಿವೃದ್ದಿಯತ್ತ ಸಾಗಬೇಕು’ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಮಾತನಾಡಿ, ಲಿಂಗರಾಜರು ದಾನಧರ್ಮದಿಂದಲೇ ತ್ಯಾಗವೀರರಾಗಿದ್ದಾರೆ. ದಾನ ಮತ್ತು ಜ್ಞಾನದಿಂದಲೇ ವೀರಶೈವ ಲಿಂಗಾಯತ ಸಮಾಜ ಶ್ರೀಮಂತವಾಗಿದೆ ಎಂದು ಹೇಳಿದರು.
ಮಲ್ಲನಕೆರೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಣ್ಣ ಕುಡುವಕ್ಕಲಿಗರ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಮುಖಂಡರಾದ ಎ.ಎಸ್. ಪಾಟೀಲ್, ಎ.ಷಣ್ಮುಖಪ್ಪ, ಎಂ.ಜಿ.ಗಚ್ಚಣ್ಣನವರ, ನಿವೃತ್ತ ಪ್ರಾಧ್ಯಾಪಕ ರವೀಂದ್ರ. ಶಿವಕುಮಾರ ಪಾಟೀಲ, ವೀರಶೈವ ಮಹಾಸಭೆ ಅಧ್ಯಕ್ಷ ಸಿ.ಕೆ.ಎಂ.ಬಸವಲಿಂಗಸ್ವಾಮಿ, ಬಸವರಾಜ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.