ಸಿರುಗುಪ್ಪ: ನಗರದ ಹೃದಯ ಭಾಗದಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಸಮಸ್ಯೆಗಳು ಕ್ರೀಡಾಪಟುಗಳನ್ನು ಸ್ವಾಗತಿಸಿಕೊಳ್ಳುತ್ತಿವೆ!
ಮೈದಾನದಲ್ಲಿ ಬಿಡಾಡಿ ದನಗಳು, ಬೀದಿ ನಾಯಿಗಳ ಹಿಂಡು, ಪ್ಲಾಸ್ಟಿಕ್, ಸಮತಟ್ಟಿಲ್ಲದ ಮೈದಾನ, ಸಣ್ಣ ಮಳೆಯಾದರೆ ಕೆಸರು ಗದ್ದೆಯಂತೆಯಾಗುವ ಅಂಗಳ, ಶೌಚಾಲಯವಿಲ್ಲದೆ ಬಯಲಿನಲ್ಲಿಯೇ ವಿಸರ್ಜನೆ, ಕ್ರೀಡಾಂಗಣದಲ್ಲಿ ಬೆಳೆದು ನಿಂತಿರುವ ಪಾರ್ಥೀನಿಯಂ ಸೇರಿದಂತೆ ಒಂದಿಲ್ಲೊಂದು ಸಮಸ್ಯೆಗಳು ಇಲ್ಲಿ ಕಾಣುತ್ತವೆ.
ರಾಜಕೀಯ ನಾಯಕರ ಬೃಹತ್ ಸಮಾವೇಶಗಳು, ಸ್ವಾತಂತ್ರ್ಯ ದಿನಾಚರಣೆ, ಗಣರಾಜೋತ್ಸವ ಬಂದಾಗಷ್ಟೇ ಕ್ರೀಡಾಂಗಣದಲ್ಲಿ ತಾತ್ಕಾಲಿಕ ದುರಸ್ತಿ ಮಾಡುತ್ತಾರೆ. ರಾಷ್ಟ್ರೀಯ ಹಬ್ಬ ಕ್ರೀಡಾಂಗಣದಲ್ಲಿ ಆಚರಿಸುವ ಕಾರಣ ಮಣ್ಣು ಸುರಿದು ಸರಿ ಮಾಡುತ್ತಾರೆ. ಆಚರಣೆಯ ನಂತರ ಯಾಥಾಸ್ಥಿತಿ ಮುಂದುವರಿಯುತ್ತದೆ. ರನ್ನಿಂಗ್ ಟ್ರ್ಯಾಕ್ ಇಲ್ಲ. ಆಟಗಾರರು ಅಭ್ಯಾಸ ಮಾಡಲು ಬಂದಾಗ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲೇ ದೊಡ್ಡ ನಗರ ಎಂಬ ಕೀರ್ತಿ ಇದ್ದರೂ ಸುಸಜ್ಜಿತ ಆಟದ ಮೈದಾನ ಇಲ್ಲವಾಗಿದೆ.
ಬಾಲಕ, ಬಾಲಕಿಯರಿಗೆ ಶೌಚಾಲಯವೇ ಇಲ್ಲವಾಗಿದೆ. ಗೋಡೆಗಳ ಮರೆಯಲ್ಲಿ ಶೌಚ ಮಾಡುವ ಪರಿಸ್ಥತಿ ಬಂದಿದೆ. ಕ್ರೀಡಾಳುಗಳು ಅನೇಕ ಬಾರಿ ಬಿದ್ದು ಇಲ್ಲಿ ಗಾಯ ಮಾಡಿಕೊಂಡಿದ್ದಾರೆ.
ಉದ್ಘಾಟನೆ ಭಾಗ್ಯ ಇಲ್ಲ : ಕ್ರಿಕೆಟ್ ಅಭ್ಯಾಸ ಮಾಡುವ ನೇಟ್ ಉದ್ಘಾಟನೆಯಾಗುವ ಮೊದಲೇ ಹಾಳಾಗಿದೆ. ಒಳ ಕ್ರೀಡಾಂಗಣ ಕಟ್ಟಡ ಕಾಮಗಾರಿ ಮುಗಿದು ವರ್ಷಗಳು ಕಳೆದರೂ ಉದ್ಘಾಟನೆಯಾಗಿಲ್ಲ.
ಕ್ರೀಡಾಂಗಣದಲ್ಲಿ ವಿದ್ಯುತ್ ದೀಪಗಳು ಇಲ್ಲ. ಕ್ರೀಡಾಂಗಣ ಕಿಡಿಗೇಡಿಗಳ ತಾಣವಾಗಿದೆ. ಸಂಜೆಯಾಗುತ್ತಿದಂತೆ ಅನೈತಿಕ ಚಟುವಟಿಕೆಗಳು ಆರಂಭವಾಗುತ್ತವೆ. ವಿವಿಧ ಸಮಸ್ಯೆಗಳಿಂದ ನರಳುತ್ತಿರುವ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗಿದೆ. ರಾತ್ರಿಯ ವೇಳೆ ವಿಹಾರ ನಡೆಸುವವರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಎತ್ತರ ಜಿಗಿತ, ಉದ್ದ ಜಿಗಿತ, ಷಾಟ್‌ಪುಟ್ ಸೇರಿದಂತೆ ವಿವಿಧ ಆಟೋಟಗಳಿಗೆ ಇರುವ ಕೋರ್ಟ್‌ಗಳು ಸರಿಯಾದ ನಿರ್ವಹಣೆ ಇಲ್ಲದೆ ಅಭ್ಯಾಸಕ್ಕೆ ತೊಡಕುಂಟಾಗುತ್ತಿದೆ.
ಕ್ರೀಡಾ ಇಲಾಖೆಯು ಕ್ರೀಡೆಗೆ ಪ್ರೋತ್ಸಾಹ ನೀಡುತ್ತವೆ ಎಂದು ಹೇಳುತ್ತಾರೆ. ಆದರೆ ಕ್ರೀಡಾಳುಗಳಿಗೆ ಅವಶ್ಯವಿರುವ ಕ್ರೀಡಾಂಗಣವನ್ನು ಅಭಿವೃದ್ದಿಪಡಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿದ್ದಾರೆಬಿ.ಈರಣ್ಣ ಉಪಾಧ್ಯಕ್ಷ ರಾಜ್ಯ ಗ್ರೇಟ್-2 ದೈಹಿಕ ಶಿಕ್ಷಕರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.