
ಸಿರುಗುಪ್ಪ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಇಲ್ಲದೆ ಬಿಕೋ ಎನ್ನುತ್ತಿದೆ
ಸಿರುಗುಪ್ಪ ತಾಲ್ಲೂಕು ಕಚೇರಿಯಲ್ಲಿ ಬೆಳಿಗ್ಗೆ 11 ಗಂಟೆಯಾದರೂ ಅಧಿಕಾರಿಗಳು ಇಲ್ಲದೆ ಬಿಕೋ ಎನ್ನುತ್ತಿತ್ತು
ಸಿರುಗುಪ್ಪ: ಇಲ್ಲಿನ ತಾಲ್ಲೂಕು ಕಚೇರಿಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದ್ದು, ನಾಗರಿಕರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿದೆ.
ಸಿಬ್ಬಂದಿ ಕೊರತೆಯಿಂದಾಗಿ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಇರುವ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಾಗಿ, ಬೇಜವಾಬ್ದಾರಿ ಹೆಚ್ಚಾಗುತ್ತಿದ್ದು, ಇದು ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾಗಿ ಸರ್ಕಾರದ ಹಾಗೂ ವೈಯಕ್ತಿಕ ಕೆಲಸ ಕಾರ್ಯಗಳಿಗೆ ಗ್ರಾಮ ಆಡಳಿತಾಧಿಕಾರಿಗಳು ಸಾರ್ವಜನಿಕರಿಗೆ ಸ್ಪಂದಿಸುತ್ತಾರೆ. ಆದರೆ ಇಲ್ಲೂ ಅತಿ ಹೆಚ್ಚಿನ ಹುದ್ದೆಗಳು ಖಾಲಿ ಉಳಿದಿವೆ.
ತಹಶೀಲ್ದಾರ್ ಗ್ರೇಡ್ 2 ಹುದ್ದೆ ಖಾಲಿ ಇದೆ. ಶಿರಸ್ತೇದಾರರ ಮೂರು ಹುದ್ದೆಗಳಲ್ಲಿ ಎರಡು ಖಾಲಿ ಇವೆ. ಪ್ರಥಮ ದರ್ಜೆ ಸಹಾಯಕರ ಆರು ಹುದ್ದೆಗಳಲ್ಲಿ ಇಬ್ಬರನ್ನು ನಿಯೋಜನೆ ಮಾಡಲಾಗಿದೆ. ಆಹಾರ ಇಲಾಖೆಯ ಶಿರಸ್ತೇದಾರ ಹಾಗೂ ದ್ವಿತೀಯ ದರ್ಜೆ ಸಹಾಯಕರ ತಲಾ ಒಂದು ಹುದ್ದೆ ಖಾಲಿ ಇದೆ.
14 ಜನ ದ್ವಿತೀಯ ದರ್ಜೆ ಸಹಾಯಕರಲ್ಲಿ ಆರು ಜನರನ್ನು ಇತರೆಡೆಗೆ ನಿಯೋಜನೆ ಮಾಡಲಾಗಿದೆ. ಬೆರಳಚ್ಚುಗಾರ ಹಾಗೂ ವಾಹನ ಚಾಲಕರ ಹುದ್ದೆಗಳು ಖಾಲಿ ಇವೆ. ಇದಲ್ಲದೆ ಭೂಮಿ ಕೇಂದ್ರದ ಆರು ಹುದ್ದೆಗಳಲ್ಲಿ ಒಂದು ಹುದ್ದೆ ಖಾಲಿಯಿದ್ದು ಒಬ್ಬರನ್ನು ಇತರೆಡೆ ನಿಯೋಜಿಸಲಾಗಿದೆ.
ಸಾಂಖಿಕ ನಿರೀಕ್ಷಕರನ್ನು ಸಹ ಬೇರೆಡೆ ನಿಯೋಜಿಸಲಾಗಿದೆ. ಗ್ರೂಪ್ ಡಿ ನೌಕರರ ಆರು ಹುದ್ದೆ ಖಾಲಿ ಇವೆ. ಒಟ್ಟಾರೆ 52 ಅಧಿಕಾರಿಗಳು ಕಾರ್ಯನಿರ್ವಹಿಸಬೇಕಾದ ತಾಲ್ಲೂಕು ಕಚೇರಿಯಲ್ಲಿ 14 ಹುದ್ದೆ ಖಾಲಿ ಇವೆ. ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 10 ನೌಕರರನ್ನು ಜಿಲ್ಲಾ ಕೇಂದ್ರದ ವಿವಿಧ ಇಲಾಖೆಗಳಿಗೆ ನಿಯೋಜಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಕೇವಲ 7 ಗ್ರಾಮ ಆಡಳಿತಾಧಿಕಾರಿಗಳ ಸೇವೆಯನ್ನು ಎರವಲು ಪಡೆದು ಕಚೇರಿಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಈಚೆಗೆ ಅಭಿಲೇಖಾಲಯ ವಿಭಾಗದಲ್ಲಿ ಲಂಚ ಪಡೆದ ವಿಡಿಯೊ ಭಾರಿ ಪ್ರಮಾಣದಲ್ಲಿ ಹರಿದಾಡಿದ ಪರಿಣಾಮವಾಗಿ ಇಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಮೂವರನ್ನು ಅಮಾನತುಗೊಳಿಸಿ, ವರ್ಗಾವಣೆ ಮಾಡಲಾಗಿದೆ.
ತಾಲ್ಲೂಕು ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ. ವಿದ್ಯಾರ್ಥಿಗಳಿಗೆ ಅಗತ್ಯವಿರುವ ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳು ಸಿಗದೇ ವಿದ್ಯಾರ್ಥಿಗಳು ಮತ್ತು ಪೋಷಕರು ಅಲೆದಾಡುವಂತಾಗಿದೆ. ಕೂಡಲೇ ಸರ್ಕಾರ ನಿಗದಿತ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ತಾಲ್ಲೂಕು ಕಚೇರಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಜಿಲ್ಲಾಡಳಿತವು ತಮ್ಮ ಕಚೇರಿಗೆ ನಿಯೋಜನೆ ಮಾಡಿದ್ದು ಇಲ್ಲಿನ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ. ಜಿಲ್ಲಾಡಳಿತ ಇಲ್ಲಿನ ಸಿಬ್ಬಂದಿಯನ್ನು ಬಿಡುಗಡೆಗೊಳಿಸಿಬೇಕು’ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಯು. ವೆಂಕೋಬ ಆಗ್ರಹಿಸಿದ್ದಾರೆ.
ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಕಾನೂನು ಹೋರಾಟದ ಎಚ್ಚರಿಕೆ ನೀಡಲಾಗಿದೆ. ಒಟ್ಟಾರೆಯಾಗಿ, ಸಿಬ್ಬಂದಿ ಕೊರತೆ ತಹಶೀಲ್ದಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸಮಸ್ಯೆಯಾಗಿದ್ದು, ಇದನ್ನು ನಿವಾರಿಸಲು ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ.
ಸಿಬ್ಬಂದಿ ಕೊರತೆಗೆ ಸಂಬಂಧಿಸಿ ಮೇಲಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಲಾಗಿದೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದುಗೌಸಿಯಾ ಬೇಗಂ, ತಹಶೀಲ್ದಾರರು, ಸಿರುಗುಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.