ADVERTISEMENT

ಸಚಿವ ಆನಂದ್‌ ಸಿಂಗ್‌ ಸಹೋದರಿ ಮನೆ ಮೇಲೆ ಎಸ್‌ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 11:57 IST
Last Updated 24 ಸೆಪ್ಟೆಂಬರ್ 2020, 11:57 IST
ಹೊಸಪೇಟೆಯ ಎಂ.ಪಿ. ಪ್ರಕಾಶ್‌ ನಗರದಲ್ಲಿರುವ ರಾಣಿ ಸಂಯುಕ್ತಾ ಅವರಿಗೆ ಸೇರಿದ ಕಚೇರಿಯಲ್ಲಿ ಶೋಧ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು
ಹೊಸಪೇಟೆಯ ಎಂ.ಪಿ. ಪ್ರಕಾಶ್‌ ನಗರದಲ್ಲಿರುವ ರಾಣಿ ಸಂಯುಕ್ತಾ ಅವರಿಗೆ ಸೇರಿದ ಕಚೇರಿಯಲ್ಲಿ ಶೋಧ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು   

ಹೊಸಪೇಟೆ: ಅರಣ್ಯ ಸಚಿವ ಆನಂದ್‌ ಸಿಂಗ್‌ ಅವರ ಸಹೋದರಿ, ಗಣಿ ಉದ್ಯಮಿ ರಾಣಿ ಸಂಯುಕ್ತಾ ಅವರಿಗೆ ಸೇರಿದ ನಗರದಲ್ಲಿನ ಎರಡು ಮನೆ, ಕಚೇರಿ ಮೇಲೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.

ಎಸ್‌ಐಟಿಯ ಇನ್‌ಸ್ಪೆಕ್ಟರ್‌ಗಳಾದ ರಾಘವೇಂದ್ರ, ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಒಳಗೊಂಡ ತಂಡವು ಈ ದಾಳಿ ನಡೆಸಿದೆ. ರಾಣಿ ಸಂಯುಕ್ತಾ ಅವರಿಗೆ ಸೇರಿದ ನಗರ ಹೊರವಲಯದ ಜೋಳದರಾಶಿ ಗುಡ್ಡದ ಬಳಿಯಿರುವ ಹೊಸ ಮನೆ, ಕಾಲೇಜು ರಸ್ತೆಯಲ್ಲಿನ ಹಳೆ ನಿವಾಸ ಹಾಗೂ ಎಂ.ಪಿ. ಪ್ರಕಾಶ್‌ ನಗರದಲ್ಲಿನ ಕಚೇರಿ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಎಸ್‌ಐಟಿ ಅಧಿಕಾರಿಗಳನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆಯೂ ಆಗಿರುವ ರಾಣಿ ಸಂಯುಕ್ತಾ ಅವರನ್ನು ಸಂಪರ್ಕಿಸಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ.
ರಾಣಿ ಸಂಯುಕ್ತಾ ಅವರಿಗೆ ಸೇರಿದ ಕೃಷ್ಣ ಮಿನರಲ್ಸ್‌ ವಿರುದ್ಧ 2015ರಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.