
ಹೂವಿನಹಡಗಲಿ: ತಾಲ್ಲೂಕಿನ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಹೊಸ್ತಿಲ ಹುಣ್ಣಿಮೆಯ ವಿಶೇಷ ಪೂಜೆಗಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಮಂಗಳವಾರ ಸುಕ್ಷೇತ್ರಕ್ಕೆ ಆಗಮಿಸಿದ್ದರು.
ಮೈಲಾರಲಿಂಗೇಶ್ವರ ಸ್ವಾಮಿಗೆ ಬೆಳಿಗ್ಗೆ ಅಭಿಷೇಕ, ವಿಶೇಷ ಪೂಜೆ ನೆರವೇರಿಸಿ, ವಿವಿಧ ಹೂಗಳಿಂದ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ನೇತೃತ್ವದಲ್ಲಿ ಹುಣ್ಣಿಮೆ ಆಚರಣೆಗಳು ಜರುಗಿದವು. ಅರ್ಚಕ ಪ್ರಮೋದ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ನಾಡಿನ ನಾನಾ ಭಾಗಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿಯ ದರ್ಶನ ಪಡೆದರು. ದೇವಸ್ಥಾನ ಆವರಣದಲ್ಲಿ ಭಕ್ತರು ದೋಣಿ ತುಂಬಿಸುವ ಸೇವೆ, ಕುದುರೆಕಾರ ಸೇವೆ, ದೀವಟಿಗೆ ಸೇವೆ ಸಲ್ಲಿಸಿದರು.
‘ಮೈಲಾರಲಿಂಗೇಶ್ವರನ ಭಕ್ತರು ಹೊಸ್ತಿಲ ಹುಣ್ಣಿಮೆಯಂದು ಸುಕ್ಷೇತ್ರಕ್ಕೆ ಆಗಮಿಸಿ ಸ್ವಾಮಿಯ ದರ್ಶನಾಶೀರ್ವಾದ ಪಡೆದು ತಮ್ಮ ಮನೆಗಳಿಗೆ ತೆರಳಿ ಹೊಸ್ತಿಲು ಪೂಜಿಸುವ ಸಂಪ್ರದಾಯ ಬೆಳೆದುಬಂದಿದೆ. ರೈತ ಸಮುದಾಯಗಳು ಈ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸುತ್ತಾರೆ’ ಎಂದು ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.