ಬಳ್ಳಾರಿ: ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ (ವಿಎಸ್‌ಕೆಯು) ನಡೆದಿದೆ ಎನ್ನಲಾದ ಘಟಿಕೋತ್ಸವ ಪ್ರಮಾಣ ಪತ್ರ ಹಗರಣದ ವರದಿಯನ್ನು ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದೆ.
‘ಒಟ್ಟು 3,330 ಮಂದಿಯಿಂದ ಅಕ್ರಮವಾಗಿ ಹಣ ಪಡೆದು, ಘಟಿಕೋತ್ಸವದ ಪ್ರಮಾಣ ಪತ್ರಗಳನ್ನು ಹಂಚಲಾಗಿದೆ’ ಎಂದು ತನಿಖಾ ಸಮಿತಿ ತನ್ನ ವರದಿಯಲ್ಲಿ ಹೇಳಿದೆ. ತನಿಖಾ ತಂಡವು ಒಟ್ಟು 45 ಸಾವಿರ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದ್ದು, 68 ಪುಟಗಳ ವರದಿಯನ್ನು ಸಲ್ಲಿಸಿದೆ.
‘ಒಂದೊಂದು ಪ್ರಮಾಣ ಪತ್ರಕ್ಕೆ ಕನಿಷ್ಠ ₹8 ಸಾವಿರಕ್ಕೂ ಹೆಚ್ಚಿನ ಹಣವನ್ನು ವಿದ್ಯಾರ್ಥಿಗಳಿಂದ ಸಂಗ್ರಹಿಸಿರಬಹುದು. ಇದರಿಂದ ವಿಶ್ವವಿದ್ಯಾಲಯದ ಬೊಕ್ಕಸಕ್ಕೆ ಭಾರೀ ಪ್ರಮಾಣದಲ್ಲಿ ಆರ್ಥಿಕ ನಷ್ಟವಾಗಿದೆ ಎಂಬ ಅಂಶ ವರದಿಯಲ್ಲಿದೆ’ ಎಂದು ಮೂಲಗಳು ತಿಳಿಸಿವೆ.
ಇದೇ ವರ್ಷ ಫೆಬ್ರುವರಿಯಲ್ಲಿ ಘಟಿಕೋತ್ಸವ ಪ್ರಮಾಣ ಪತ್ರ ಹಗರಣ ಬಯಲಾಗಿತ್ತು. ಇದರ ತನಿಖೆಗೆ ಮೌಲ್ಯಮಾಪನ ಕುಲಸಚಿವರು ಫೆಬ್ರುವರಿ 20ರಂದು 9 ಜನರ ಸಮಿತಿ ರಚಿಸಿದ್ದರು. ಐದು ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ತಡವಾಗಿ ವರದಿ ಸಲ್ಲಿಕೆಯಾಗಿದೆ.
‘ಇದೇ ವರದಿ ಆಧರಿಸಿ ಈ ಹಿಂದಿನ ಇಬ್ಬರು ಮೌಲ್ಯಮಾಪನ ಕುಲಸಚಿವರು ಸೇರಿ, ಹಲವು ಸಿಬ್ಬಂದಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅವರನ್ನು ತನಿಖಾ ಸಮಿತಿಯು ವಿಚಾರಣೆಗೆ ಒಳಪಡಿಸಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ ಮುನಿರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ತನಿಖಾ ವರದಿ ಸಲ್ಲಿಕೆಯಾಗಿದೆ. ಆದರೆ, ಆರೋಪಿಗಳ ವಿಚಾರಣೆ ನಡೆದಿಲ್ಲ. ವಿಚಾರಣೆ ಬಳಿಕ ವಿಷಯವನ್ನು ಸಿಂಡಿಕೇಟ್ ಸಭೆಗೆ ತರಲಾಗುವುದು. ನಂತರ ಉನ್ನತ ಮಟ್ಟದ ತನಿಖೆ ನಡೆಸಬೇಕೆ ಅಥವಾ ಅಥವಾ ಎಫ್‌ಐಆರ್ ದಾಖಲಿಸಬೇಕೆ ಎಂಬುದನ್ನು ತೀರ್ಮಾನಿಸುತ್ತೇವೆ’ ಎಂದರು.
ಘಟಿಕೋತ್ಸವದ ಎರಡೂವರೆ ಸಾವಿರದಷ್ಟು ಪ್ರಮಾಣ ಪತ್ರಗಳು ಅಕ್ರಮವಾಗಿರುವುದು ಗೊತ್ತಾಗಿದೆ. ಕನಿಷ್ಠ ₹70 ಲಕ್ಷದಷ್ಟು ವಂಚನೆ ಆಗಿರಬಹುದು.– ಪ್ರೊ ಮುನಿರಾಜು, ಕುಲಪತಿ, ವಿಎಸ್‌ಕೆಯು, ಬಳ್ಳಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.