ADVERTISEMENT

ಪ್ರಜಾವಾಣಿ ವರದಿ ಪರಿಣಾಮ | ಎಸ್‌ಎಸ್‌ಎಲ್‌ಸಿ–2 ಪರೀಕ್ಷಾ ಅಕ್ರಮ: ನೋಟಿಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:16 IST
Last Updated 10 ಜುಲೈ 2025, 5:16 IST
   

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ–2ರಲ್ಲಿ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷಾ ಅವ್ಯವಹಾರ ನಡೆದಿರುವ ಬಗ್ಗೆ, ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ ತನಿಖೆ ಆರಂಭಿಸಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ  ಪ್ರಕಟವಾಗಿದ್ದ ವರದಿ ಆಧರಿಸಿ ಶಾಲಾ ಶಿಕ್ಷಣ ಇಲಾಖೆಯು ಹಲವರಿಗೆ ನೋಟಿಸ್‌ ಜಾರಿಗೊಳಿಸಿದೆ.  

ತನಿಖೆ ಆರಂಭವಾಗಿರುವ ಕುರಿತು ಪ್ರಜಾವಾಣಿಯ ಜುಲೈ 6ರ ಸಂಚಿಕೆಯಲ್ಲಿ ‘ಎಸ್‌ಎಸ್‌ಎಲ್‌ಸಿ –2 ಪರೀಕ್ಷೆ: ಕೇಂದ್ರವೊಂದರಲ್ಲಿ ಅಕ್ರಮ?’ ಎಂಬ ವಿಶೇಷ ವರದಿ ಪ್ರಕಟವಾಗಿತ್ತು. 

ಪರೀಕ್ಷಾ ಅವ್ಯವಹಾರದ ಕುರಿತು ತನಿಖೆ ಆರಂಭಿಸಿರುವ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ’ಯು ಬಳ್ಳಾರಿ ಪೂರ್ವ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ, ಬಳ್ಳಾರಿಯ ಕಂಬಳಿ ಬಜಾರ್‌ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ನರಸಿಂಹಮೂರ್ತಿ, ಎಸ್‌ಯುಜೆಎಸ್‌ ಪ್ರೌಢಶಾಲೆಯ ಸಹಶಿಕ್ಷಕ ಎಚ್‌.ಎಂ ಕೊಟ್ರದೇವರು, ಅಂದ್ರಾಳ್‌ ಸರ್ಕಾರಿ  ಶಾಲೆಯ ಸಹಶಿಕ್ಷಕ ಕೆ. ಕೇಶವರೆಡ್ಡಿ, ಮಿಂಚೇರಿ ಸರ್ಕಾರಿ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರು ನಿಲೋಫರ್‌ ಬೇಗಂ, ಕಂಬಳಿ ಬಜಾರ್‌ ಶಾಲೆಯ ಸಮೂಹ ಸಂಪನ್ಮೂಲ ವ್ಯಕ್ತಿ ಲವಕುಮಾರ್‌ ಮತ್ತು ಸಂಬಂಧಿಸಿದ ವಿದ್ಯಾರ್ಥಿಗಳನ್ನು ವಿಚಾರಣೆಗೆ ಕರೆದಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ADVERTISEMENT

ಹೀಗಾಗಿ ಈ ಎಲ್ಲ ಅಧಿಕಾರಿ, ಶಿಕ್ಷಕರಿಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜಾರಿಗೊಳಿಸಿದ್ದು, ಮೂರು ದಿನಗಳ ಒಳಗಾಗಿ ಉತ್ತರ ನೀಡುವಂತೆ ಜುಲೈ 7ರಂದು ತಿಳಿಸಿದ್ದರು. ಅದರಂತೆ ಎಲ್ಲರೂ ಜುಲೈ 10ರಂದು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದಾರೆ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.