ADVERTISEMENT

SSLC Results: ಮೇಲೇರದ ಬಳ್ಳಾರಿ

ಆರ್. ಹರಿಶಂಕರ್
Published 3 ಮೇ 2025, 4:27 IST
Last Updated 3 ಮೇ 2025, 4:27 IST
<div class="paragraphs"><p>ಎಸ್‌ಎಸ್‌ಎಲ್‌ಸಿ ಫಲಿತಾಂಶ</p></div>

ಎಸ್‌ಎಸ್‌ಎಲ್‌ಸಿ ಫಲಿತಾಂಶ

   

– ಗೆಟ್ಟಿ ಚಿತ್ರ

ಬಳ್ಳಾರಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದಲ್ಲಿ ಬಳ್ಳಾರಿ ಜಿಲ್ಲೆ ಈ ಬಾರಿಯಾದರೂ ಉನ್ನತ ಸಾಧನೆ ಮಾಡುವುದೇ ಎಂಬ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಜಿಲ್ಲೆಗಳ ರ್‍ಯಾಂಕ್‌ ಪಟ್ಟಿಯಲ್ಲಿ ಕಳೆದ ಬಾರಿಗಿಂತಲೂ ಒಂದು ಸ್ಥಾನ ಕೆಳಗೆ ಜಾರುವ ಮೂಲಕ ಆಘಾತವುಂಟು ಮಾಡಿದೆ. 

ADVERTISEMENT

2023–24ನೇ ಸಾಲಿನಲ್ಲಿ ಶೇ 64.99 ಫಲಿತಾಂಶದೊಂದಿಗೆ 28ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ ಈ ಬಾರಿ ಶೇ 59.86ರ ಫಲಿತಾಂಶದೊಂದಿಗೆ 29ನೇ ಸ್ಥಾನಕ್ಕೆ ಬಂದು ನಿಂತಿದೆ. ಪರೀಕ್ಷೆಗೆ ಹಾಜರಾದ ಒಟ್ಟು 20,262 ವಿದ್ಯಾರ್ಥಿಗಳಲ್ಲಿ 12,128 ಮಂದಿ ಉತ್ತೀರ್ಣರಾಗಿದ್ದಾರೆ. 7,998 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲೂ ಹೆಣ್ಣುಮಕ್ಕಳೇ ಹೆಚ್ಚಿನ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ. 9,852 ಗಂಡು ಮಕ್ಕಳ ಪೈಕಿ 5,102 ಹಾಗೂ 10,410 ಹೆಣ್ಣುಮಕ್ಕಳ ಪೈಕಿ 7,026 ಮಂದಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ಶೇ 56.09ರಷ್ಟು ಫಲಿತಾಂಶ ಸಿಕ್ಕಿದೆ. 

ವಿಜ್ಞಾನದಲ್ಲಿ ಹಿಂದೆ: ವಿಷಯವಾರು ಫಲಿತಾಂಶ ಗಮನಿಸಿದರೆ ವಿಜ್ಞಾನಕ್ಕೆ ಅತ್ಯಂತ ಕಡಿಮೆ (ಶೇ 66) ಫಲಿತಾಂಶ ಸಿಕ್ಕಿದೆ. ತೃತೀಯ ಭಾಷೆಗೆ ಶೇ 83ರಷ್ಟು ಫಲಿತಾಂಶ ಬಂದಿದೆ. ಪ್ರಥಮ ಭಾಷೆಗೆ ಶೇ 76, ಸಮಾಜ ವಿಜ್ಞಾನಕ್ಕೆ ಶೇ 75, ದ್ವಿತೀಯ ಭಾಷೆಗೆ ಶೇ 74, ಗಣಿತಕ್ಕೆ ಶೇ 69 ಫಲಿತಾಂಶ ಸಿಕ್ಕಿದೆ.

ನಾವು ಅಂದುಕೊಂಡಂತೆ ಫಲಿತಾಂಶ ಬಂದಿಲ್ಲ. ಪರೀಕ್ಷೆಯಲ್ಲಿ ಈಗ ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ತಕ್ಷಣದಿಂದಲೇ ಪರೀಕ್ಷೆ –2ಗೆ ಸಜ್ಜುಗೊಳಿಸಲಾಗುವುದು
ಉಮಾದೇವಿ ಉಪ ನಿರ್ದೇಶಕಿ ಶಾಲಾ ಶಿಕ್ಷಣ ಇಲಾಖೆ

ಬಳ್ಳಾರಿ ಜಿಲ್ಲೆ ಹಿಂದೆ ಬೀಳಲು ಕಾರಣವೇನು? 

ಬಳ್ಳಾರಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದ ಮೇಲೆ ಆಡಳಿತಾತ್ಮಕ ಆರ್ಥಿಕ ಸಾಮಾಜಿಕ ಪರಿಸ್ಥಿತಿಗಳೂ ಸೇರಿದಂತೆ ಹಲವು ಅಂಶಗಳು ಪ್ರಭಾವ ಬೀರಿವೆ. ಜಿಲ್ಲೆಯ ಪ್ರೌಢ ಶಾಲೆಗಳಿಗೆ ಮಂಜೂರಾದ ಶಿಕ್ಷಕರ ಹುದ್ದೆಗಳು 1198. ಆದರೆ ಕರ್ತ್ಯವ್ಯ ನಿರ್ವಹಿಸುತ್ತಿರುವವರ ಸಂಖ್ಯೆ 711 ಮಾತ್ರ. ಇನ್ನುಳಿದ 487 ಹುದ್ದೆಗಳು ಖಾಲಿ ಬಿದ್ದಿವೆ. 

ಅತಿಥಿ ಶಿಕ್ಷಕರ ಒಟ್ಟು 1611 ಹುದ್ದೆಗಳು ಮಂಜೂರಾಗಿದ್ದರೆ 433 ಹುದ್ದೆಗಳು ಖಾಲಿ ಇವೆ. ಹಲವು ಶಾಲೆಗಳಲ್ಲಿ ಅತಿಥಿ ಶಿಕ್ಷಕರೇ ಎಲ್ಲವೂ ಆಗಿದ್ದಾರೆ. ಪ್ರಾಥಮಿಕ ಶಾಲೆಗಳಲ್ಲೇ 1118 ಶಿಕ್ಷಕರ ಕೊರತೆ ಇದೆ. ಇದು ಬೋಧನೆ ಮೇಲೆ ಪರಿಣಾಮ ಬೀರುತ್ತಿದೆ. ಜಿಲ್ಲೆಯಲ್ಲಿ ಬಡ ವರ್ಗದ ಜನರೇ ಅಧಿಕವಾಗಿದ್ದು ಗುಳೆ ಸಾಮಾನ್ಯ. ಮಕ್ಕಳು ಶಾಲೆಗೆ ಗೈರಾಗುವುದೂ ಅಷ್ಟೇ ಸಾಮಾನ್ಯ ಎನ್ನಲಾಗಿದೆ.

ನಿರಂತರವಾಗಿ ಗೈರಾಗುತ್ತಿದ್ದ 450–500 ವಿದ್ಯಾರ್ಥಿಗಳನ್ನು ಈ ಬಾರಿ ಇಲಾಖೆ ಸೂಚನೆ ಮೇರೆಗೆ ಕರೆತಂದು ಪರೀಕ್ಷೆಗೆ ಕೂರಿಸಲಾಗಿತ್ತು. ತರಬೇತಿ ನೀಡಿದ್ದರೂ ಈ ಮಕ್ಕಳಿಂದ ಉತ್ತಮ ಫಲಿತಾಂಶ ಬಂದಿಲ್ಲ ಎನ್ನಲಾಗಿದೆ.  ಜಿಲ್ಲೆಯಲ್ಲಿ 4500ರಷ್ಟು ಮಕ್ಕಳನ್ನು ಎನ್‌ಸಿ (ನಾಟ್‌ ಕಂಪ್ಲೀಟೆಡ್‌) ಎಂದು ಗುರುತು ಮಾಡಲಾಗಿತ್ತು.

ಅಂದರೆ ವಾಕ್ಯ ರಚನೆಯೂ ಬಾರದ ಮಕ್ಕಳು. ಈ ಮಕ್ಕಳ ಮೇಲೆ ಶಿಕ್ಷಣ ಇಲಾಖೆ ಹೆಚ್ಚಿನ ಗಮನ ವಹಿಸಿತ್ತಾದರೂ ಅವರಿಂದಲೂ ನಿರೀಕ್ಷಿತ ಸಾಧನೆ ಆಗಿಲ್ಲ. ಆಡಳಿತಾತ್ಮಕವಾಗಿಯೂ ಜಿಲ್ಲೆಯಲ್ಲಿ ಸಮಸ್ಯೆಗಳಾಗಿವೆ. ವಿಷಯಗಳ ಉಸ್ತುವಾರಿ ನೋಡುತ್ತಿದ್ದವರನ್ನು ಇಲಾಖೆ ದಿಢೀರ್‌ ವರ್ಗಾವಣೆ ಮಾಡಿತ್ತು. ಇದು ಕಾರ್ಯಕ್ರಮ ರೂಪಿಸುವುದರ ಮೇಲೆ ಹೊಡೆತ ಬಿದ್ದಿತ್ತು.

ಡಿಡಿಪಿಐ ಕಚೇರಿಯಲ್ಲಿ ನಾಲ್ಕು‘ಸಬ್ಜೆಕ್ಟ್‌ ಇನ್ಸ್‌ಪೆಕ್ಟರ್‌’ಗಳ ಸ್ಥಾನ ಖಾಲಿ ಬಿದ್ದಿತ್ತು. ಕನ್ನಡ ವಿಜ್ಞಾನ ಇಂಗ್ಲಿಷ್‌ ಸಮಾಜ ವಿಜ್ಞಾನವನ್ನು ನೋಡುವವರೇ ಇರಲಿಲ್ಲ. ವರ್ಷಾಂತ್ಯದಲ್ಲಿ ಅವರ ನೇಮಕವಾಯಿತಾದರೂ ಪರಿಸ್ಥಿತಿ ಹತೋಟಿಗೆ ಸಿಗಲು ಕಷ್ಟವಾಯಿತು.  ‘ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾ ಇರುವುದು ತಿಳಿಯುತ್ತಲೇ ಮಕ್ಕಳು ಆತಂಕ್ಕೆ ಒಳಗಾಗಿದ್ದರು. ಅಲುಗಾಡಿದರೂ ಬೆಂಗಳೂರಿನಿಂದ ಕರೆಗಳು ಬರುತ್ತಿದ್ದವು. ಇದರಿಂದ ಮಕ್ಕಳು ಬೇಸತ್ತಿದ್ದರು. ಪರೀಕ್ಷೆ ಬರೆಯುವಾಗ ಅವರ ಮುಖದಲ್ಲಿ ಆತಂಕ ಕಾಣುತ್ತಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಮಾಹಿತಿ ನೀಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ 2ನೇ ಸ್ಥಾನ

 ಅತಿ ಹಿಂದುಳಿದ ಜಿಲ್ಲೆಗಳೆನಿಸಿಕೊಂಡಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಜಿಲ್ಲೆ ಎರಡನೇ ಸ್ಥಾನ ಪಡೆದುಕೊಂಡಿದೆ. ಶೇ 67.62 ಫಲಿತಾಂಶದೊಂದಿಗೆ ವಿಜಯನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಬಳ್ಳಾರಿ (60.26) ದ್ವಿತೀಯ ಕೊಪ್ಪಳ (57.32) ತೃತೀಯ ಹಾಗೂ ಬೀದರ್‌ (53.25) ರಾಯಚೂರು (52.05) ಯಾದಗಿರಿ (51.6) ಕಲಬುರಗಿ (42.43)  ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.