ಹೂವಿನಹಡಗಲಿ: ಭಾವೀ ಮತದಾರರಾಗಿರುವ ವಿದ್ಯಾರ್ಥಿಗಳಿಗೆ ಜನತಂತ್ರ ವ್ಯವಸ್ಥೆಯ ಸಮಗ್ರ ಪರಿಚಯ, ಸಾರ್ವಜನಿಕರಿಗೆ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ನಡೆಸಿರುವ ತಾಲ್ಲೂಕಿನ ಹಿರೇಕೊಳಚಿ ಎಸ್.ಎಸ್.ಬಿ.ಎಚ್. ಸರ್ಕಾರಿ ಪ್ರೌಢಶಾಲೆಯ ಮತದಾರರ ಸಾಕ್ಷರತಾ ಕ್ಲಬ್‌ಗೆ ಚುನಾವಣಾ ಆಯೋಗ ರಾಜ್ಯ ಪ್ರಶಸ್ತಿ ಘೋಷಿಸಿದೆ.
ಮತದಾರರ ಸಾಕ್ಷರತಾ ಕ್ಲಬ್(ಇ.ಎಲ್.ಸಿ) ವತಿಯಿಂದ ಕಳೆದ ಜೂನ್‌ನಲ್ಲಿ ಶಾಲಾ ಸಂಸತ್‌ಗೆ ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆಗಳನ್ನು ಪರಿಚಯಿಸಲಾಗಿತ್ತು. ಸಂಪುಟ ಸಭೆ, ಶಾಲಾ ಸಂಸತ್ ಅಣಕು ಅಧಿವೇಶನ ಗಮನ ಸೆಳೆದಿತ್ತು. ಜನತಂತ್ರ, ಚುನಾವಣೆಗೆ ಸಂಬಂಧಿಸಿದ ರಸಪ್ರಶ್ನೆ, ಪ್ರಬಂಧ, ಪೋಸ್ಟರ್ ಮೇಕಿಂಗ್, ಸಾರ್ವಜನಿಕರಿಗೆ ಮತದಾನದ ಅರಿವು, ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮುಖ್ಯಶಿಕ್ಷಕ ಡಿ.ಎನ್.ಮಹಾಂತೇಶ, ಕ್ರಿಯಾಶೀಲ ಶಿಕ್ಷಕ ಹಾಗೂ ಇಎಲ್ ಸಿ ಸಂಚಾಲಕ ಬನ್ನೆಪ್ಪ ಅವರು ವಿಶೇಷ ಆಸಕ್ತಿ ವಹಿಸಿ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಿದ್ದರು.
ವರ್ಷವಿಡೀ ಶಾಲೆಯಲ್ಲಿ ಕೈಗೊಂಡ ಚಟುವಟಿಕೆ ಆಧರಿಸಿ ರಾಜ್ಯ ಚುನಾವಣಾ ಆಯೋಗ ಈ ಶಾಲೆಯ ಮತದಾರರ ಸಾಕ್ಷರತಾ ಕ್ಲಬ್ ಗೆ ‘ಅತ್ಯುತ್ತಮ ಮತದಾರರ ಸಾಕ್ಷರತಾ ಸಂಘ’ ರಾಜ್ಯಪ್ರಶಸ್ತಿ ಪ್ರಕಟಿಸಿದ್ದು, ಜ.25ರಂದು ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಜರುಗುವ ಮತದಾರರ ದಿನಾಚರಣೆಯಲ್ಲಿ ಶಾಲೆಯ ಇ.ಎಲ್. ಕ್ಲಬ್ ಸಂಚಾಲಕರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಇ.ಎಲ್ ಕ್ಲಬ್‌ನಿಂದ ಮತದಾನ ನಿರಾಸಕ್ತಿ ಕುರಿತು ನಿರ್ಮಿಸಿರುವ ಕಿರುಚಿತ್ರ ಚುನಾವಣಾ ಆಯೋಗದ ಪ್ರಶಂಸೆಗೆ ಪಾತ್ರವಾಗಿದೆ.
2021-22ನೇ ಸಾಲಿನಲ್ಲೂ ಈ ಶಾಲೆಗೆ ರಾಜ್ಯ ಪ್ರಶಸ್ತಿ ಲಭಿಸಿದ್ದು, ಎರಡನೇ ಬಾರಿ ಈ ಗ್ರಾಮೀಣ ಶಾಲೆ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಚುನಾವಣಾ ಆಯೋಗ ಗ್ರಾಮೀಣ ಶಾಲೆಯ ಚಟುವಟಿಕೆ ಗುರುತಿಸಿ ಎರಡನೇ ಬಾರಿಗೆ ರಾಜ್ಯ ಪ್ರಶಸ್ತಿ ಘೋಷಿಸಿರುವುದು ಸಂತಸ ತಂದಿದೆ
-ಬನ್ನೆಪ್ಪ ಸಂಚಾಲಕ ಇಎಲ್ ಕ್ಲಬ್ ಹಿರೇಕೊಳಚಿ ಪ್ರೌಢಶಾಲೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.