ಕೂಡ್ಲಿಗಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಹುಲಿಕುಂಟೆಯ ಹೊಸಕೆರೆಕಟ್ಟೆಯಲ್ಲಿ ಶಾಸನ ಪತ್ತೆಯಾಗಿದೆ ಎಂದು ಪಟ್ಟಣದ ಎಸ್‍ಎವಿಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಓ. ಓಬಯ್ಯ ತಿಳಿಸಿದ್ದಾರೆ.
ಸುಮಾರು 6 ಅಡಿ ಉದ್ದ ಮತ್ತು 1 ಅಡಿ ಅಗಲ ಕೆತ್ತಲಾಗಿರುವ ಶಾಸನದಲ್ಲಿ ಸೂರ್ಯ ಚಂದ್ರರ ಮಧ್ಯ ಶ್ರೀ ಅಕ್ಷರವಿದ್ದು, ಶ್ರೀ ಕೃಷ್ಣ ಪದ ಉಲ್ಲೇಖವಿದೆ. ಹುಲಿಕುಂಟೆಯ ಭೀಮನಗಾನು ಎಂಬುವರ ಜಮೀನಿನಲ್ಲಿ ಡಾಲಿಗಾರು ಪುತ್ರರೊಂದಿಗೆ 1890ರಲ್ಲಿ ಕೆರೆ ಕಟ್ಟಿಸಿದ ಬಗ್ಗೆ ಮತ್ತು ಕೆರೆ ನಿರ್ಮಾಣಕ್ಕೆ ತಗುಲಿದ ವೆಚ್ಚದ ಕುರಿತು ಶಾಸನ ತಿಳಿಸುತ್ತದೆ.
‘ಈ ಶಾಸನವು ಕನ್ನಡ ಲಿಪಿಯ 16 ಸಾಲುಗಳನ್ನು ಒಳಗೊಂಡಿದ್ದು. ಅಲ್ಲಲ್ಲಿ ಕನ್ನಡ ಮತ್ತು ಇಂಗ್ಲಿಷ್ ಅಂಕೆಗಳನ್ನು ಬಳಸಿರುವುದು ಕಂಡು ಬರುತ್ತದೆ. ಒಟ್ಟಿನಲ್ಲಿ ಈ ಶಾಸನದ ಲಿಪಿ ಮತ್ತು ಆರಂಭದಲ್ಲಿ ಶ್ರೀ ಕೃಷ್ಣ ಪದದ ಉಲ್ಲೇಖದ ಆಧಾರದ ಮೇಲೆ ಮೈಸೂರು ಒಡೆಯರ ಕಾಲದ ಶಾಸನವೆಂದು ಗುರುತಿಸಬಹುದು’ ಎಂದು ಅವರು ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಶಾಸನ ತಜ್ಞ ಎಚ್.ಎಂ. ನಾಗರಾಜರಾವ್ ಈ ಶಾಸನದ ಲಿಪಿಯನ್ನು ಓದಿ ಅರ್ಥ ತಿಳಿಸಿದ್ದಾರೆ. ಮೊಳಕಾಲ್ಮುರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಯೋಗಾನಂದ, ಹೊಸಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎಚ್.ಎಂ. ತಿಪ್ಪೇಸ್ವಾಮಿ, ಕೂಡ್ಲಿಗಿ ಇತಿಹಾಸ ಉಪನ್ಯಾಸಕರಾದ ಸಂತೋಷಕುಮಾರ್, ಬೋರಯ್ಯ, ಎಲ್. ಸಂದೀಪ್ ಅವರ ನೆರವಿನಿಂದ ಶಾಸನ ಪತ್ತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.