ADVERTISEMENT

ನೋಡ ಬನ್ನಿ ಪಾಳೇಗಾರರ ತವರೂರು ಕೂಡ್ಲಿಗಿ

ಎ.ಎಂ.ಸೋಮಶೇಖರಯ್ಯ
Published 27 ಸೆಪ್ಟೆಂಬರ್ 2021, 8:15 IST
Last Updated 27 ಸೆಪ್ಟೆಂಬರ್ 2021, 8:15 IST
ಕೂಡ್ಲಿಗಿ ತಾಲ್ಲೂಕಿನ ಕುಮತಿ ಬಳಿ ಇರುವ ಶಿಲಾ ಮಾನವಕೃತಿಗಳು
ಕೂಡ್ಲಿಗಿ ತಾಲ್ಲೂಕಿನ ಕುಮತಿ ಬಳಿ ಇರುವ ಶಿಲಾ ಮಾನವಕೃತಿಗಳು   

ಕೂಡ್ಲಿಗಿ: ಪುರಾತನ ಪಳೆಯುಳಿಕೆಗಳು, ಐತಿಹಾಸಿಕ ದೇವಸ್ಥಾನಗಳು, ಪಾಳೆಗಾರರು ಆಳಿದ ಸ್ಥಳಗಳು, ಗುಡೇಕೋಟೆಯ ಕರಡಿ ಧಾಮ, ಪಟ್ಟಣದಲ್ಲಿನ ಗಾಂಧೀಜಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕ... ಇವು ತಾಲ್ಲೂಕಿನ ಪ್ರಮುಖ ಪ್ರವಾಸಿ ತಾಣಗಳು.

ತಾಲ್ಲೂಕಿನ ಗುಣಸಾಗರದಲ್ಲಿ ವಿಜಯನಗರ ಆರಸರ ಕಾಲದ್ದು ಎನ್ನಲಾದ ಶ್ರೀ ಕೃಷ್ಣ ದೇವಸ್ಥಾನವಿದೆ. ಏಕಶಿಲೆಯಿಂದ ಕೆತ್ತನೆ ಮಾಡಿರುವ ವೇಣುಗೋಪಾಲಕೃಷ್ಣನ ಸುಂದರ ಮೂರ್ತಿಯಿಂದ ಈ ಸ್ಥಳ ಪ್ರಸಿದ್ಧಿ ಪಡೆದಿದೆ. ಈ ದೇವಾಲಯವನ್ನು ಮಹಾನ್ ಶಿಲ್ಪಿ ಜಕಣಾಚಾರಿ ನಿರ್ಮಿಸಿದ್ದರು ಎಂದು ಹೇಳಲಾಗುತ್ತದೆ.

ಚಿತ್ರದುರ್ಗದ ಒನಕೆ ಓಬವ್ವ ತವರೂರಾದ ಗುಡೇಕೋಟೆಯಲ್ಲಿ ಪಾಳೆಗಾರರು ಆಳಿದ ಆನೇಕ ಕುರುಹುಗಳಿವೆ. ಗ್ರಾಮದ ಪಕ್ಕದಲ್ಲಿರುವ ಬೆಟ್ಟದಲ್ಲಿ ಉಗ್ರಾಣ, ಸಿಹಿ ನೀರಿನ ಭಾವಿ, ಕೋಟೆಯ ಕುರುಹುಗಳಿವೆ. ಗ್ರಾಮದಲ್ಲಿ ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿರುವ ಅಪರೂಪದ ಮೂರ್ತಿ ಇರುವ ದೇವಸ್ಥಾನ ಗಮನ ಸೆಳೆಯುತ್ತದೆ.

ADVERTISEMENT

ಜರಿಮಲೆಯಲ್ಲಿ ವಿಶಾಲವಾದ ಪ್ರದೇಶದಲ್ಲಿ ಕೋಟೆಯ ಅವಶೇಷಗಳಿವೆ. ಕೋಟೆಯ ಹೆಬ್ಬಾಗಿಲು, ಆನೆ ಹೊಂಡ, ಶಸ್ತ್ರಾಸ್ತ್ರ ಉಗ್ರಾಣ ಮತ್ತಿತರ ಕುರುಹುಗಳಿವೆ. ಪಾಳೇಗಾರರ ಕೊನೆಯ ತಲೆಮಾರಿನ ಸಿದ್ದಪ್ಪ ನಾಯಕರು ಈಗಲೂ ಇದ್ದಾರೆ. ಜರಿಮಲೆಯ ಸೀತಾಫಲ ಹಣ್ಣು ಈ ಭಾಗದಲ್ಲಿ ಪ್ರಸಿದ್ಧ. ಅದರಲ್ಲೂ ದೊಡ್ಡ ಗಾತ್ರದ ಉಪ್ಪರಿಗೆ ಹಣ್ಣುಗಳು ಸಿಹಿಯಲ್ಲಿ ಮಧುರ.

ಅದರಂತೆ ಕಾನಾಮಡಗು ಗ್ರಾಮದ ದಾಸೋಹಮಠ, ಕುಮತಿ ಬಳಿಯ ಶಿಲಾಯುಗದ ಮಾನಾವಕೃತಿ ರಕ್ಕಸಗಲ್ಲುಗಳು, ಕೈವಲ್ಯಾಪುರದ ಅನಂತಪದ್ಮನಾಭ ದೇವಸ್ಥಾನ, ಬೀರಗಲಗುಡ್ಡದ ಪಾಳೆಗಾರ ಬಸಪ್ಪ ನಾಯಕ ನಿರ್ಮಾಣ ಮಾಡಿದ ವೀರನದುರ್ಗ ಕೋಟೆ ನೋಡುಗರನ್ನು ಸೆಳೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.