ADVERTISEMENT

ತವರಿನತ್ತ ಕಾರ್ಮಿಕರ ಪಯಣ ಶುರು

ರೈಲು ಟಿಕೆಟ್‌ ದೊರಕದೇ ಹತಾಶರಾದವರಲ್ಲಿ ಸಂಭ್ರಮ

ಕೆ.ನರಸಿಂಹ ಮೂರ್ತಿ
Published 3 ಜೂನ್ 2020, 10:27 IST
Last Updated 3 ಜೂನ್ 2020, 10:27 IST
ಬಳ್ಳಾರಿಯಲ್ಲಿ ಬುಧವಾರ ಮಧ್ಯಪ್ರದೇಶಕ್ಕೆ ಕರೆದೊಯ್ಯುವ ಬಸ್‌ ಹತ್ತುವ ಮುನ್ನ ಕಾರ್ಮಿಕರು ‘ಥ್ಯಾಂಕ್ಸ್‌ ಟು ಧರ್ಹಣ್‌ ಇಂಡಿಯನ್‌ ಗ್ರೂಪ್‌’ ಎಂಬ ಫಲಕಗಳನ್ನು ಪ್ರದರ್ಶಿಸಿದರು.
ಬಳ್ಳಾರಿಯಲ್ಲಿ ಬುಧವಾರ ಮಧ್ಯಪ್ರದೇಶಕ್ಕೆ ಕರೆದೊಯ್ಯುವ ಬಸ್‌ ಹತ್ತುವ ಮುನ್ನ ಕಾರ್ಮಿಕರು ‘ಥ್ಯಾಂಕ್ಸ್‌ ಟು ಧರ್ಹಣ್‌ ಇಂಡಿಯನ್‌ ಗ್ರೂಪ್‌’ ಎಂಬ ಫಲಕಗಳನ್ನು ಪ್ರದರ್ಶಿಸಿದರು.   

ಬಳ್ಳಾರಿ: ಅವರೆಲ್ಲ ಶ್ರಮಿಕ ರೈಲು ಟಿಕೆಟ್ ಸಿಗದೇ ಹತಾಶರಾಗಿದ್ದವರು. ತಮ್ಮ ತವರಿಗೆ ವಾಪಸಾಗುವುದು ಹೇಗೆ ಎಂದು ಅರಿಯದೇ ಸಂಕಟದಲ್ಲಿದ್ದವರು.

ಅತಂತ್ರರಾಗಿ ಜಿಲ್ಲೆಯಲ್ಲೇ ಉಳಿದಿದ್ದ ಮಧ್ಯಪ್ರದೇಶದ ಸಿಧಿ ಜಿಲ್ಲೆಯ 59 ಕಾರ್ಮಿಕರು ಜಿಲ್ಲಾಡಳಿತ ಹಾಗೂ ದುಬೈನಲ್ಲಿರುವ ದಾನಿ ಸಂಸ್ಥೆ ಧರ್ಹಣ್ ಇಂಡಿಯನ್‌ ಗ್ರೂಪ್‌ಅವರ ನೆರವಿಗೆ ಬಂದ ಪರಿಣಾಮವಾಗಿ ಎರಡು ಬಸ್‌ಗಳಲ್ಲಿ ಬುಧವಾರ ತಮ್ಮ ತವರಿನತ್ತ ಪ್ರಯಾಣವನ್ನು ಆರಂಭಿಸಿದರು.

ಕಂಪ್ಲಿಯಲ್ಲಿ ಕಾಲುವೆ ದುರಸ್ತಿ ಕೆಲಸ ಮಾಡುತ್ತಿದ್ದ ಅವರಿಗೆ ರೈಲು ಟಿಕೆಟ್ ದೊರಕಿರಲಿಲ್ಲ. ಹೀಗಾಗಿ ಅವರು ಐದು ದಿನಗಳ ಹಿಂದೆ ಬಳ್ಳಾರಿಗೆ ಬಂದು ಜಿಲ್ಲಾಧಿಕಾರಿ ಕಚೇರಿಯನ್ನು ಸಂಪರ್ಕಿಸಿದ್ದರು.

ADVERTISEMENT

ಪ್ರಯಾಣದ ವ್ಯವಸ್ಥೆ ಆಗುವವರೆಗೂ ಅವರನ್ನು ಹೊಸಪೇಟೆ ರಸ್ತೆಯ ಕ್ಲಾಸಿಕ್‌ ಫಂಕ್ಷನ್‌ ಹಾಲ್‌ನಲ್ಲಿರಿಸಲಾಗಿತ್ತು. ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ವತಿಯಿಂದ ಊಟೋಪಚಾರದ ವ್ಯವಸ್ಥೆ ಮಾಡಿದ್ದರಿಂದ ಅವರು ಸಮಾಧಾನಪಟ್ಟುಕೊಂಡಿದ್ದರು. ಈ ಬುಧವಾರ ಅವರಿಗೆ ವಿಶೇಷವಾಗಿತ್ತು.

‘ಕಾರ್ಮಿಕರ ಪ್ರಯಾಣ ವೆಚ್ಚದಲ್ಲಿ ₨ 1.80 ಲಕ್ಷವನ್ನು ದಾನಿ ಸಂಸ್ಥೆಯು ಭರಿಸಿತು. ಕಾರ್ಮಿಕರು ತಲಾ ₨ 3 ಸಾವಿರ ಭರಿಸಿದರು. ನಂತರ ಎರಡು ಬಸ್‌ಗಳನ್ನು ನಿಗದಿ ಮಾಡಿ ಅವರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಿದೆವು’ ಎಂದು ರೆಡ್‌ ಕ್ರಾಸ್‌ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅರ್ಧ ತಿಂಗಳ ಸಂಬಳ: ‘ಕಾರ್ಮಿಕರು ಇಲ್ಲೇ ಇದ್ದು ಕೆಲಸ ಮುಂದುವರಿಸಿದರೆ ಪೂರ್ತಿ ಸಂಬಳ ನೀಡುವುದಾಗಿ ಗುತ್ತಿಗೆದಾರರು ಹೇಳಿದ್ದರು. ಆದರೆ ಕಾರ್ಮಿಕರು ತಮ್ಮೂರಿಗೆ ಹೊರಟು ನಿಂತಿದ್ದರಿಂದ ತಕ್ಷಣಕ್ಕೆ ಅರ್ಧ ತಿಂಗಳ ಸಂಬಳವಾಗಿ ತಲಾ ₨ 9 ಸಾವಿರ ಪಾವತಿಸಿದ್ದಾರೆ. ಕಾರ್ಮಿಕ ಇಲಾಖೆಗೂ ಈ ಮಾಹಿತಿ ನೀಡಲಾಗಿದೆ’ ಎಂದರು.

1334 ಕಿಮೀ ಪ್ರಯಾಣ: ‘ಕಾರ್ಮಿಕರ ಜಿಲ್ಲೆಗೆ ಬಳ್ಳಾರಿಯಿಂದ ಅಂದಾಜು 1,334 ಕಿ ಮೀ ಅಂತರವಿದ್ದು ಕನಿಷ್ಠ 30 ಗಂಟೆ ಕಾಲ ಪ್ರಯಾಣಿಸಬೇಕು’ ಎಂದು ಮಾಹಿತಿ ನೀಡಿದರು.

ಕಾರ್ಮಿಕರ ತಂಡದ ನೇತೃತ್ವ ವಹಿಸಿದ್ದ ವಿಕ್ರಂಸಿಂಗ್‌ ಬೈಸ್‌, ‘ನಾವು ಇಲ್ಲೇ ಇದ್ದರೆ ಜೀವನ ನಡೆಸುವುದು ಕಷ್ಟಕರವಾಗುತ್ತದೆ ಎಂಬ ಕಾರಣಕ್ಕೆ ಊರಿಗೆ ಹೋಗುತ್ತಿದ್ದೇವೆ. ರೈಲಿನಲ್ಲಿ ಹೋಗಲು ಆಗದೇ ಹತಾಶರಾಗಿದ್ದ ನಮ್ಮನ್ನು ಬಸ್‌ನಲ್ಲಿ ಕಳಿಸಿಕೊಡುತ್ತಿರುವುದು ಸಂತೋಷ ತಂದಿದೆ’ ಎಂದರು.

‘ಥ್ಯಾಂಕ್ಸ್‌ ಟು ಧರ್ಹಣ್‌ ಗ್ರೂಪ್’:ಬಸ್‌ ಹತ್ತುವ ಮುನ್ನ ಕಾರ್ಮಿಕರೆಲ್ಲರೂ ‘ಥ್ಯಾಂಕ್ಸ್‌ ಟು ಧರಣ್‌ ಇಂಡಿಯನ್‌ ಗ್ರೂಪ್‌’ ಎಂಬ ಫಲಕಗಳನ್ನು ಪ್ರದರ್ಶಿಸಿ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.

‘ಸಂಸ್ಥೆಯು ಆರ್ಥಿಕ ನೆರವನ್ನು ನೀಡಿದ್ದಕ್ಕೆ, ಜಿಲ್ಲಾಡಳಿತ ಶೀಘ್ರಗತಿಯಲ್ಲಿ ಸ್ಪಂದಿಸಿದ್ದಕ್ಕೆ ಕಾರ್ಮಿಕರನ್ನು ಇಷ್ಟು ಬೇಗ ಅವರ ಊರಿಗೆ ಕಳಿಸಲು ಸಾಧ್ಯವಾಗುತ್ತಿದೆ’ ಎಂದು ಎಂ.ಎ.ಷಕೀಬ್‌ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.