ADVERTISEMENT

ಹೂವಿನಹಡಗಲಿ: ಚಲಿಸುವ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವು

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 10:50 IST
Last Updated 13 ಏಪ್ರಿಲ್ 2023, 10:50 IST
ಮೃತ ವಿದ್ಯಾರ್ಥಿನಿ
ಮೃತ ವಿದ್ಯಾರ್ಥಿನಿ   

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ಪಟ್ಟಣ ಹೊರ ವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಬಳಿ ಬುಧವಾರ ಚಲಿಸುತಿದ್ದ ಬಸ್ ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಂಭವಿಸಿದೆ.

ಹೊಳಲು ಗ್ರಾಮದ ಎಲ್.ಶ್ವೇತಾ ಶಾಂತಪ್ಪನವರ (20) ಮೃತ ವಿದ್ಯಾರ್ಥಿನಿ. ಇಲ್ಲಿನ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಇ ಅಂಡ್ ಸಿ ವಿಭಾಗದ ಮೊದಲ ಸೆಮಿಸ್ಟರ್ ನಲ್ಲಿ ಓದುತಿದ್ದ ಶ್ವೇತಾ ಪ್ರತಿದಿನ ಪಟ್ಟಣದ ಹಾಸ್ಟೆಲ್ ನಿಂದ ಕಾಲೇಜಿಗೆ ಬಸ್ ನಲ್ಲಿ ಹೋಗಿ ಬರುತಿದ್ದರು.

ಪಟ್ಟಣ ನಿಲ್ದಾಣದಲ್ಲಿ ಹಾವೇರಿಗೆ ಹೊರಟಿದ್ದ ಬಸ್ ಹತ್ತಿದ್ದ ವಿದ್ಯಾರ್ಥಿನಿ ಕಾಲೇಜು ಬಳಿ ನಿಲುಗಡೆ ಕೇಳಿದ್ದಾಳೆ. ಇಲ್ಲಿ ಬಸ್ ನಿಲುಗಡೆ ಮಾಡಲಾಗುವುದಿಲ್ಲ ಎಂದು ನಿರ್ವಾಹಕಿ ಹೇಳಿದ್ದಾರೆ. ಕಾಲೇಜು ಮುಂಭಾಗದಲ್ಲಿ ರಸ್ತೆ ತಡೆಗಳಿರುವ ಬಸ್ ನಿಧಾನವಾಗಿ ಚಲಿಸುತ್ತಿರುವ ವೇಳೆ ವಿದ್ಯಾರ್ಥಿನಿ ಇಳಿಯುವ ಪ್ರಯತ್ನ ಮಾಡಿದ್ದಾಳೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟಾಗಿದೆ. ತಕ್ಷಣ ವಿದ್ಯಾರ್ಥಿನಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಗೆ ಆಸ್ಪತ್ರೆಗೆ ಕಳಿಸಿಕೊಡಲಾಗಿತ್ತು. ಅಲ್ಲಿ ಮೃತಪಟ್ಟಿದ್ದಾಳೆ. ಬಸ್ ಚಾಲಕ, ನಿರ್ವಾಹಕರ ವಿರುದ್ಧ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರತಿಭಟನೆ : ‘ಬಸ್ ನಿಲುಗಡೆಗೆ ಮನವಿ ಮಾಡಿದರೂ ಚಾಲಕ, ನಿರ್ವಾಹಕರು ಸ್ಪಂದಿಸದೇ ಇದ್ದುದರಿಂದ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡಿದ್ದಾಳೆ. ಅಮಾನವೀಯವಾಗಿ ನಡೆದುಕೊಂಡ ಚಾಲಕ, ನಿರ್ವಾಹಕರ ಮೇಲೆ ಕ್ರಮ ಜರುಗಿಸಬೇಕು’ ಎಂದು ಎಬಿವಿಪಿ ಪದಾಧಿಕಾರಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಕಾಲೇಜು ಬಳಿ ಬಸ್ ಗಳ ನಿಲುಗಡೆಗೆ ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಯಾರೂ ಸ್ಪಂದಿಸಿಲ್ಲ. ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಸ್ ಗಳನ್ನು ನಿಲುಗಡೆ ಮಾಡಬೇಕು. ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

(ಎಬಿವಿಪಿ ನಗರ ಘಟಕದ ಅಧ್ಯಕ್ಷ ರವಿ ಸೊಪ್ಪಿನ, ಜಿಲ್ಲಾ ಸಹ ಸಂಚಾಲಕ ಕೊಟ್ರೇಶ್ ಕಲಿಕೇರಿ, ವಿದ್ಯಾರ್ಥಿಗಳಾದ ವಿವೇಕ್ ,ರಾಕೇಶ್ ,ಮನೋಜ್ ಶಿವು ,ಸಚಿನ್, ವರುಣ್ ,ಧನುಷ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರ್ ಕೆ.ಶರಣಮ್ಮ ಸ್ಥಳಕ್ಕೆ ಭೇಟಿ ನೀಡಿ, ಈ ಮಾರ್ಗದಲ್ಲಿ ಓಡಾಡುವ ಎಲ್ಲ ಬಸ್ ಗಳನ್ನು ನಿಲುಗಡೆ ಮಾಡಿಸಲು ಕ್ರಮ ಕೈಗೊಳ್ಳುತ್ತೇವೆ. ಇಲ್ಲಿ ಯಾವುದೇ ಬಸ್ ನಿಲ್ಲಿಸದೇ ಹೋದಲ್ಲಿ ಬಸ್ ಸಂಖ್ಯೆ ತಿಳಿಸಿದರೆ, ಚಾಲಕ, ನಿರ್ವಾಹಕರ ಮೇಲೆ ಕ್ರಮಕ್ಕೆ ಪತ್ರ ಬರೆಯುತ್ತೇವೆ ಎಂದು ಹೇಳಿದರು.

ಮೃತ ವಿದ್ಯಾರ್ಥಿನಿ ಶ್ವೇತಾ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ತಾಂತ್ರಿಕ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಿ, ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಸಿಪಿಐ ಸುಧೀರ್ ಬೆಂಕಿ, ಪಿಎಸ್ಐ ಸಂತೋಷ ಡಬ್ಬಿನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.