
ಸಿರುಗುಪ್ಪ: ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಸ್ಪಷ್ಟ ಗುರಿಗಳನ್ನು ನಿಗದಿಪಡಿಸಿಕೊಳ್ಳಿ, ವ್ಯವಸ್ಥಿತ ವೇಳಾಪಟ್ಟಿ ರೂಪಿಸಿ, ಸಕ್ರಿಯ ಕಲಿಕೆ ಹಾಗೂ ಪುನರ್ಮನನ ಅಭ್ಯಾಸ ಮಾಡುವುದು ಮುಖ್ಯ ಎಂದು ತಹಶೀಲ್ದಾರ್ ಗೌಸಿಯ ಬೇಗಂ ಹೇಳಿದರು.
ನಗರದ ಗುರು ಸಾಂಸ್ಕೃತಿಕ ಭವನದಲ್ಲಿ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡ ‘ವಸತಿ ನಿಲಯ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ವೃತ್ತಿ ಮಾರ್ಗದರ್ಶನ’ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಆರೋಗ್ಯಕರ ಆಹಾರ ಮತ್ತು ನಿದ್ರೆಗೆ ಆದ್ಯತೆ ನೀಡಿ, ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕಡಿಮೆ ಮಾಡಿಕೊಂಡು ಕಲಿಕೆಯಲ್ಲಿ ಧನಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಬಲಕುಂದಿ ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಚಂದ್ರಮೌಳಿ ಮಾತನಾಡಿ, ದಿನನಿತ್ಯದ ಚಟುವಟಿಕೆಗಳಿಗೆ ಸಮಯ ನಿಗದಿಪಡಿಸಿ ಏಕಾಗ್ರತೆಯಿಂದ ಓದಬೇಕು. ಕೇವಲ ಓದುವ ಬದಲು, ಓದಿದ್ದನ್ನು ಟಿಪ್ಪಣಿ ಮಾಡಿಕೊಳ್ಳಬೇಕು. ಆರೋಗ್ಯಕ್ಕಾಗಿ ಪೌಷ್ಟಿಕ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ ಮತ್ತು ನಿಯಮಿತ ವ್ಯಾಯಾಮ ಮಾಡಿ. ಕಲಿತ ವಿಷಯಗಳನ್ನು ಆಗಾಗ್ಗೆ ಪುನರ್ಮನನ ಮೂಲಕ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ತಿಳಿಸಿದರು.
ಟಿ.ಎಸ್.ಎಚ್.ಎಂ.ಎಸ್.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಕೆ.ಎಂ.ಚಂದ್ರಕಾಂತ ಮಾತನಾಡಿ, ನಿರಂತರ ಪ್ರಯತ್ನ ಮತ್ತು ಆತ್ಮವಿಶ್ವಾಸದಿಂದ ಓದುವುದರಿಂದ ಪರೀಕ್ಷೆಗಳಲ್ಲಿ ಉತ್ತಮ ಫಲಿತಾಂಶ ಸಾಧಿಸಬಹುದು. ದೀರ್ಘಾವಧಿಯ ಅಧ್ಯಯನದ ನಡುವೆ ಸಹಪಠ್ಯ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಬಿಸಿಎಂ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ, ನಗರಸಭೆ ಪೌರಾಯುಕ್ತ ಗಂಗಾಧರ, ಉಪನ್ಯಾಸಕರಾದ ಜೀವೇಶ್ ಕುಲಕರ್ಣಿ, ದೊಡ್ಡ ಬಸಪ್ಪ ಮಾತನಾಡಿದರು.
ನಿಲಯಪಾಲಕರಾದ ಕೆ.ವೆಂಕಟೇಶ, ಶಾಂತ, ರಾಘವೇಂದ್ರ, ಮಲ್ಲಿಕಾರ್ಜುನ ಹಾಗೂ ವಿದ್ಯಾರ್ಥಿಗಳು ಭಾಗವಹಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.