
ತೆಕ್ಕಲಕೋಟೆ : ಪಟ್ಟಣದ ಗೌಡ್ರಮೂಲೆ ಬೆಟ್ಟ ಪ್ರದೇಶಗಳಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳಕ್ಕೆ ಸೋಮವಾರ ಜನರು ತಂಡೋಪತಂಡವಾಗಿ ಆಗಮಿಸಿದರು. ಇದರಿಂದ ಉತ್ಖನನ ಕಾರ್ಯಕ್ಕೆ ಅಡ್ಡಿಯುಂಟಾಗುತ್ತಿದೆ ಎಂದು ಉತ್ಖನನ ಕಾರ್ಯದ ಸಹ ನಿರ್ದೇಶಕಿ ನಮಿತಾ ಎಸ್ ಸುಗಂಧಿ ಕಣ್ಣೀರಿಟ್ಟ ಪ್ರಸಂಗ ನಡೆಯಿತು.
ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಸೋಮವಾರ ಬೆಳಿಗ್ಗೆ ನಮಿತಾ ಅವರು ಉತ್ಖನನ ಕಾರ್ಯದಲ್ಲಿ ತೊಡಗಿದ್ದರು. ಬೆಳಿಗ್ಗೆ 10ರ ಸುಮಾರಿಗೆ 20 ರಿಂದ 30 ಜನರ ತಂಡ ಸ್ಥಳಕ್ಕೆ ಬಂದಿತು. ಅಸ್ತಿಪಂಜರ ಸಿಕ್ಕಿರುವ ಗುಂಡಿಗೆ ಹೊದಿಸಲಾಗಿದ್ದ ಟಾರ್ಪಲಿನ್ ಹಾಗೂ ಬಿಳಿ ಬಣ್ಣದ ಹೊದಿಕೆ ತೆಗೆದರು. ಇದರಿಂದ ಗಾಬರಿಯಾದ ನಮಿತಾ ಅಳುತ್ತ ಮೂಲೆಯಲ್ಲಿ ಮುದುಡಿ ಕುಳಿತುಕೊಂಡರು.
ಸ್ವಲ್ಪ ಹೊತ್ತಿನ ನಂತರ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಿಮ್ಮ ಕುತೂಹಲ ನನಗೆ ಅರ್ಥವಾಗುತ್ತದೆ. ಆದರೆ ನಮಗೆ ಕೇವಲ ಎರಡು ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಉತ್ಖನನ ಕಾರ್ಯಕ್ಕೆ ತೊಂದರೆಯಾಗುತ್ತದೆ. ಸಹಕರಿಸಿ’ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಅವರು ‘ಯುವಕರು ಫೋನ್ ಮೂಲಕ ವಿಡಿಯೊ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನೊಂದಿಗೆ ಹಾಗೂ ಇಲ್ಲಿನ ಸ್ಥಳದ ಬಗ್ಗೆ ತಪ್ಪು ಮಾಹಿತಿ ಹರಡಿದಲ್ಲಿ ಯಾರು ಜವಾಬ್ದಾರಿ’ ಎಂದು ಬೇಸರ ವ್ಯಕ್ತಪಡಿಸಿದರು.
ಇದಕ್ಕೂ ಮುಂಚೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಇಲ್ಲಿನ ಸವಿಸ್ತಾರ ಬೆಟ್ಟಗಳಿಂದಾಗಿ ತೆಕ್ಕಲಕೋಟೆಯನ್ನು ಜಾಗತಿಕವಾಗಿ ಮಹತ್ವದ ನವಶಿಲಾಯುಗ ಮತ್ತು ಲೋಹಯುಗದ ತಾಣವೆಂದು ಗುರುತಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.
‘ಇತಿಹಾಸ ಅಧ್ಯಯನಾಸಕ್ತರು ಈ ಸ್ಥಳವನ್ನು ಸಂಶೋಧನೆಗೆ ಹಾಗೂ ಉತ್ಖನನಕ್ಕೆ ಆಯ್ಕೆ ಮಾಡಿಕೊಂಡಲ್ಲಿ ಪುರಾತತ್ತ್ವ ಶಾಸ್ತ್ರದ ತಾಣಗಳನ್ನು ಜಗತ್ತಿಗೆ ಪರಿಚಯಿಸಬಹುದು’ ಎಂದು ತಿಳಿಸಿದರು.
‘ನಮ್ಮ ಉತ್ಖನನದ ನಂತರವಾದರೂ ಸರ್ಕಾರ ಕಾಳಜಿ ತೋರಿದಲ್ಲಿ ಇನ್ನೂ ಹೆಚ್ಚಿನ ಕುತೂಹಲಕಾರಿ ಅಂಶಗಳನ್ನು ಪತ್ತೆ ಮಾಡಬಹುದು’ ಎಂದು ಆಶಯ ವ್ಯಕ್ತಪಡಿಸಿದರು.
ಉತ್ಖನನ ಸ್ಥಳಕ್ಕೆ ಭೇಟಿ ನೀಡಿದ ಕಥೆಗಾರ, ಲೇಖಕ ವೀರೇಂದ್ರ ರಾವಿಹಾಳ್ ಮಾತನಾಡಿ, ‘ತೆಕ್ಕಲಕೋಟೆಯ ಬೆಟ್ಟ ಪ್ರದೇಶಗಳು ಸಂಗನಕಲ್ಲು ನೆಲೆಗಳಿಗಿಂತಲೂ ವ್ಯಾಪಕವಾಗಿ ಹರಡಿಕೊಂಡಿವೆ. ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಈ ಮಾನವನ ನೆಲೆಯನ್ನು ಜಗತ್ತಿಗೆ ಪರಿಚಯಿಸಿ, ಹೆಚ್ಚಿನ ಸಂಶೋಧನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
‘ಇಲ್ಲಿನ ಪ್ರಾಗೈತಿಹಾಸಿಕತೆಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಸಲುವಾಗಿ, ಇಲ್ಲಿ ದೊರೆತ ಎಲ್ಲಾ ವಸ್ತುಗಳನ್ನು ತೆಕ್ಕಲಕೋಟೆಯಲ್ಲಿಯೇ ವಸ್ತುಸಂಗ್ರಹಾಲಯ ನಿರ್ಮಿಸುವ ಕೆಲಸ ಮಾಡಬೇಕು’ ಎಂದು ಬಳ್ಳಾರಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪ ಒತ್ತಾಯಿಸಿದರು.
ಯುವಕರು ಹಾಗೂ ಶಾಲೆಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಾರಣ ಪೊಲೀಸರು ಸ್ಥಳಕ್ಕೆ ಒಂದು ಜನರನ್ನು ನಿಯಂತ್ರಿಸಿದರು.
ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯ
ಬಳ್ಳಾರಿಯ ಒಡಲಲ್ಲಿ ಆದಿಮಾನವನ ಕುರುಹು ಪತ್ತೆಯಾದರೂ ಈ ಮಣ್ಣಿನ ಇತಿಹಾಸ 5000 ವರ್ಷಗಳಾಚೆಗೆ ಚಾಚಿಕೊಳ್ಳುತ್ತಿದ್ದರೂ ಜಿಲ್ಲಾಡಳಿತ ಯಾವುದೇ ಅಧಿಕಾರಿ ಇತ್ತ ಸುಳಿದಿಲ್ಲ. ಈ ಮೂಲಕ ಇಲ್ಲಿನ ಮಹತ್ವದ ಬೆಳವಣಿಗೆಗೆ ಅಧಿಕಾರಿಗಳು ದಿವ್ಯ ಮೌನ ಪ್ರದರ್ಶಿಸಿದೆ ಎಂಬ ಬೇಸರ ಹಲವರಿಂದ ವ್ಯಕ್ತವಾಗಿದೆ. ಸೋಮವಾರ ಉತ್ಖನನ ಸ್ಥಳಕ್ಕೆ ಕಂದಾಯ ಅಧಿಕಾರಿಗಳನ್ನು ಕಳುಹಿಸಿದ್ದ ಸಿರುಗುಪ್ಪ ತಾಲ್ಲೂಕು ಆಡಳಿತ ಉತ್ಖನನಕ್ಕೆ ಅನುಮತಿ ಇದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಿತೇ ಹೊರತು ಬೆಂಬಲ ನೀಡುವ ನಡೆಗಳನ್ನು ಪಾಲಿಸಲಿಲ್ಲ. ಈ ತಾಣವನ್ನು ಸಂರಕ್ಷಿಸಬೇಕು ಅಧ್ಯಯನಕ್ಕೆ ಆಯ್ದುಕೊಳ್ಳಬೇಕು ಎಂದು ಉತ್ಖನನದ ನೇತೃತ್ವ ವಹಿಸಿರುವ ಸುಗಂಧಿ ಹೇಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.