
ತೆಕ್ಕಲಕೋಟೆ: ಸಮೀಪದ ಬಲಕುಂದಿ - ಮುದೇನೂರು ಗ್ರಾಮಕ್ಕೆ ತೆರಳುವ ರಸ್ತೆ ಎಡಬದಿಯಲ್ಲಿ ರೈತ ಮೌನೇಶ್ ಎಂಬುವರ ಹೊಲದಲ್ಲಿ ಅಪರೂಪದ ಹಾಗೂ ಸುಂದರವಾದ ಕಪ್ಪುಕಲೆಯ ಸೂರ್ಯಶಿಲ್ಪ ಪತ್ತೆಯಾಗಿದೆ.
ಕಪ್ಪು ಶಿಲೆಯಲ್ಲಿ ಕೆತ್ತನೆ ಮಾಡಿದ ಸೂರ್ಯ ಶಿಲ್ಪವು ತುಂಬಾ ನುಣುಪಾಗಿದೆ. ಇದು ಪೂರ್ವ ದಿಕ್ಕಿಗೆ ಮುಖ ಮಾಡಿದ್ದು, ಶಿಲ್ಪವು 51 ಸೆಂ.ಮೀ ಅಗಲ, 83 ಸೆಂ.ಮೀ ಎತ್ತರ ಹಾಗೂ ಪಾದದ ಅಳತೆಯು 13 ಸೆಂ.ಮೀ ಇದೆ. ತನ್ನ ಎರಡು ಕೈಯಲ್ಲಿ ಕಮಲ ಹಿಡಿದಿರುವಂತೆ ಕಾಣಿಸುವ ಈ ಶಿಲ್ಪದ ತಲೆಯ ಹಿಂಬದಿಗೆ ವೃತ್ತಾಕಾರದ ಪ್ರಭಾವಳಿಯು ಕಂಡುಬರುತ್ತದೆ.
ಶಿಲ್ಪದ ಕೆತ್ತನೆಯ ಆಧಾರದ ಮೇಲೆ 11ನೇ ಶತಮಾನದ್ದು ಎಂದು ಗುರುತಿಸಲಾಗಿದೆ. ಏಕೆಂದರೆ ಆ ಕಾಲಾವಧಿಯಲ್ಲಿ ಬಲಕುಂದಿ 300ನ್ನು ಸಿಂಧರು ಆಳ್ವಿಕೆ ನಡೆಸುತ್ತಿದ್ದರು ಹಾಗೂ ಈ ಭಾಗದಲ್ಲಿ ರಾಷ್ಟ್ರಕೂಟರ ಕಾಲಾವಧಿಯ ಶಾಸನಗಳು ಪತ್ತೆಯಾಗಿವೆ ಎಂದು ಪ್ರೊ.ಎಚ್.ತಿಪ್ಪೆಸ್ವಾಮಿ ತಿಳಿಸಿದ್ದಾರೆ.
ಈ ಸೂರ್ಯ ಶಿಲ್ಪದ ಕಾಲುಗಳು ತುಂಡಾಗಿವೆ. ಇಂತಹ ಚಾರಿತ್ರಿಕ ಶಿಲ್ಪಗಳು ಮುಂದಿನ ಪೀಳಿಗೆಗೆ ತಿಳಿಸಿಕೊಡಲು ಸಂರಕ್ಷಿಸಬೇಕಾಗಿದೆ ಎಂದು ಇತಿಹಾಸ ಅಕಾಡೆಮಿಯ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎಚ್.ಎಂ ತಿಳಿಸಿದ್ದಾರೆ.
ವಿಜಯನಗರ ತಿರುಗಾಟ ಸಂಶೋಧನಾ ತಂಡದ ಸದಸ್ಯ ಡಾ.ಗೋವಿಂದ ಮಾತನಾಡಿ,'ಬಲಕುಂದಿಯು ಐತಿಹಾಸಿಕವಾಗಿ, ಪೌರಾಣಿಕವಾಗಿ ಪ್ರಸಿದ್ದಿಯನ್ನು ಪಡೆದಿದೆ. ಬೇರೆಲ್ಲೂ ಇಲ್ಲದ ಬ್ರಹ್ಮನ ಶಿಲ್ಪವು ಬನ್ನಿ ಮಹಾಂಕಳಿ ದೇಗುಲದ ಎದುರಿಗೆ ಇದೆ. ಅಲ್ಲದೇ ಹಗರಿಯ ನದಿಯ ದಂಡೆಯ ಮೇಲೆ ದೇವಿ ವಿಗ್ರಹ, ನಾಗಶಿಲ್ಪ ಹಾಗೂ ತುಂಡಾದ ನಂದಿ ಮೂರ್ತಿಗಳಿವೆ. ಇಂತಹ ಅಪರೂಪದ ಶಿಲ್ಪಗಳನ್ನು ಸಂಬಂಧಪಟ್ಟ ಇಲಾಖೆಯು ಸಂರಕ್ಷಣೆ ಮಾಡಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.
ವಿಜಯನಗರ ಸಂಶೋಧನಾ ತಿರುಗಾಟ ತಂಡದ ಸದಸ್ಯ ಬಸವರಾಜ ಹಾಗೂ ಗ್ರಾಮಸ್ಥರಾದ ಹನುಮಂತಪ್ಪ, ಜಡೇಶ್, ಕುಬೇರಪ್ಪ ಅವರ ಸಹಕಾರದಿಂದ ಪತ್ತೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.