ADVERTISEMENT

ಬಳ್ಳಾರಿ: ಬಡಿಗೆಗಳಲ್ಲಿ ಬಡಿದಾಡುವ ಮಾಳ ಮಲ್ಲೇಶ್ವರ ಜಾತ್ರೆ

ಸಿರುಗುಪ್ಪ ತಾಲ್ಲೂಕಿಗೆ ಹೊಂದಿಕೊಂಡ ಆಂಧ್ರ ಗಡಿಯಲ್ಲಿ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2022, 13:16 IST
Last Updated 6 ಅಕ್ಟೋಬರ್ 2022, 13:16 IST
ಜಾತ್ರೆಯ ಚಿತ್ರ
ಜಾತ್ರೆಯ ಚಿತ್ರ   

ಬಳ್ಳಾರಿ: ಆಂಧ್ರ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ವಿಜಯ ದಶಮಿ ದಿನವಾದ ಬುಧವಾರ ದೇವರನ್ನು ತಮ್ಮೂರಿಗೆ ಕೊಂಡೊಯ್ಯಲು ಭಕ್ತರು ಬಡಿಗೆಗಳನ್ನು ಹಿಡಿದು ಬಡಿದಾಡುವ ಮೂಲಕ ಜಾತ್ರೆ ಆಚರಿಸಿದರು. ಈ ಬಡಿದಾಟದಲ್ಲಿ 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ವಿಜಯದಶಮಿ ದಿನ ಮಧ್ಯ ರಾತ್ರಿ ಆಂಧ್ರದ ದೇವರಗಟ್ಟು ಗ್ರಾಮದಲ್ಲಿ ನಡೆಯುವ ಮಾಳ ಮಲ್ಲೇಶ್ವರ ಜಾತ್ರೆಯಲ್ಲಿ ಜನ ಬಡಿಗೆಗಳನ್ನು ಹಿಡಿದು ಬಡಿದಾಡಿದರು. 20 ಸಾವಿರಕ್ಕೂ ಹೆ್ಚ್ಚು ಜನ ಜಾತ್ರೆಗೆ ಬಂದಿದ್ದರು.

ದೇವರುಗಟ್ಟು ಗ್ರಾಮ ಕರ್ನಾಟಕದ ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲ್ಲೂಕಿನ ಗಡಿಗೆ ತಾಗಿಕೊಂಡಿದೆ. ಈ ಗ್ರಾಮದಲ್ಲಿ ಪ್ರತಿ ವರ್ಷ ಮಾಳ ಮಲ್ಲೇಶ್ವರ ಜಾತ್ರೆ ನಡೆಯುತ್ತೆ. ಈ ಜಾತ್ರೆಯಲ್ಲಿ ಕರ್ನಾಟಕದಿಂದಲೂ ಭ‌ಕ್ತರು ತೆರಳಿದ್ದರು. ಜಾತ್ರೆಗೆ ಬಂದಿದ್ದ ಭಕ್ತರು ಮಧ್ಯರಾತ್ರಿ 1 ಗಂಟೆಯಿಂದ ಬೆಳಿಗ್ಗೆ 5ರ ವರಗೆ ಬಡಿಗೆಗಳನ್ನು ಹಿಡಿದು ಬಡಿದಾಡಿದರು. ಇದು ಗ್ರಾಮ, ಗ್ರಾಮಗಳ ನಡುವೆ ನಡೆಯುವ ಸಾಂಪ್ರದಾಯಕ ಬಡಿದಾಟ.

ADVERTISEMENT

ವಿಜಯದಶಮಿ ದಿನ ಮಧ್ಯ ರಾತ್ರಿ ದೇವರನ್ನು ತಮ್ಮೂರಿಗೆ ಕೊಂಡೊಯ್ಯಲು ಬಡಿದಾಟ ನಡೆಯಿತು. ಆಂಧ್ರದ ಕರ್ನೂಲ್‌ ಜಿಲ್ಲೆ ಆಲೂರ ಮಂಡಲದ ನೆಣಕಿ ಗ್ರಾಮಕ್ಕೆ ಸೇರಿದ ಅರಣ್ಯದ ಗುಡ್ಡದ ಮೇಲೆ ಮಾಳ ಮಲ್ಲೇಶ್ವರ ದೇವಸ್ಥಾನವಿದೆ. ಇದಕ್ಕೆ ದೇವರ ಗುಡ್ಡ ಎಂದು ಕರೆಯಲಾಗುತ್ತದೆ.

ಇಲ್ಲಿನ ಬಹುತೇಕ ಜನ ಕನ್ನಡ ಭಾಷಿಕರೇ ಆಗಿರುವುದರಿಂದ ಕಾರಣಿಕ ಕನ್ನಡದಲ್ಲೇ ನುಡಿಯುವುದು ವಿಶೇಷ. ಈ ದೃಶ್ಯ ನೋಡಲು ಸಾವಿರಾರು ಭಕ್ತರು ಆಗಮಿಸಿದ್ದರು. ಬಡಿಗೆ ಬಡಿದಾಟದಲ್ಲಿ ವಿದ್ಯಾವಂತರು ಭಾಗವಹಿಸಿದ್ದು ಮತ್ತೊಂದು ವಿಶೇಷ.

ರಾತ್ರಿ ನಡೆದ ಮಾಳಮ್ಮ ಮತ್ತು ಮಲ್ಲೇಶ್ವರ ಸ್ವಾಮಿಯ ಕಲ್ಯಾಣೋತ್ಸವದಲ್ಲಿ ಉತ್ಸವ ಮೂರ್ತಿ ಮತ್ತು ಪಲ್ಲಕ್ಕಿಯನ್ನು ಹೊತ್ತು ನೆಣಕಿ ಗ್ರಾಮದ ಭಕ್ತರು ದೇವರ ಗುಡ್ಡಕ್ಕೆ ಬಂದರು. ಈ ವೇಳೆ ಕಬ್ಬಿಣದ ಸಲಾಕೆ ಸುತ್ತಿದ ಕೋಲು ಹಿಡಿದು ತಂಡ, ತಂಡಗಳಲ್ಲಿ ತಮಟೆ ಬಾರಿಸುತ್ತ, ಹಿಲಾಲು ಉರಿಸುತ್ತಾ, ಕುಣಿಯುತ್ತಾ ಉತ್ಸವ ಮೂರ್ತಿ ತಂದರು.

ಇದು ನೂರಾರು ವರ್ಷಗಳಿಂದ ನಡೆದು ಬಂದಿರುವ ಪದ್ಧತಿ. ಈ ಸಂಭ್ರಮದಲ್ಲಿ ಜನರ ಮಧ್ಯೆ ನಡೆಯುವ ಹೊಡೆದಾಟದಲ್ಲಿ ಏನೇ ಅನಾಹುತವಾದರೂ ಯಾರೂ ಹೊಣೆ ಅಲ್ಲ. ನೆಣಕಿ, ಎಳ್ಳಾರ್ತಿ, ವಿರುಪಾಪುರ, ಸುಳುವಾಯಿ ಮತ್ತಿತರ ಗ್ರಾಮಗಳವರು ಉತ್ಸವ ಮೂರ್ತಿಗಳನ್ನು ತಮ್ಮ ಗ್ರಾಮಕ್ಕೆ ಒಯ್ಯಲು ಕಾದಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.