ADVERTISEMENT

ಬಳ್ಳಾರಿಯಲ್ಲಿಲ್ಲ ಸರ್ಕಾರಿ ಗೋಶಾಲೆ: ಅಕ್ರಮ ಸಾಗಾಟದ 377 ಪ್ರಕರಣ ಬಾಕಿ

ಆರ್. ಹರಿಶಂಕರ್
Published 25 ಜನವರಿ 2025, 5:46 IST
Last Updated 25 ಜನವರಿ 2025, 5:46 IST
<div class="paragraphs"><p>ಗೋಶಾಲೆ&nbsp;</p></div>

ಗೋಶಾಲೆ 

   

(ಸಾಂದರ್ಭಿಕ ಚಿತ್ರ)

ಬಳ್ಳಾರಿ: ಕಸಾಯಿಖಾನೆಗಳಿಗೆ ಗೋವುಗಳ ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಎರಡು ವರ್ಷಗಳಲ್ಲಿ 903 ಪ್ರಕರಣಗಳು ದಾಖಲಾಗಿದ್ದು, 526 ಪ್ರಕರಣಗಳು ಇತ್ಯರ್ಥಗೊಂಡಿವೆ.377 ಪ್ರಕರಣಗಳು ಬಾಕಿ ಉಳಿದಿವೆ.

ADVERTISEMENT

ಇತ್ತೀಚೆಗೆ ಅಂತ್ಯಗೊಂಡ ವಿಧಾನಮಂಡಳ ಅಧಿವೇಶನದ ವೇಳೆ ವಿಧಾನಸಭೆ ಮತ್ತು ವಿಧಾನಪರಿಷತ್‌ನ ಹಲವು ಸದಸ್ಯರು ಪಶು ಸಂಗೋಪನಾ ಇಲಾಖೆಗೆ ಕೇಳಿದ್ದ ಪ್ರಶ್ನೆಗಳಿಂದ ಈ ವಿಷಯ ಗೊತ್ತಾಗಿದೆ.  

2023ರಲ್ಲಿ 425 ಪ್ರಕರಣಗಳ ಪೈಕಿ 309 ಪ್ರಕರಣಗಳು ಇತ್ಯರ್ಥಗೊಂಡಿದ್ದವು. 116 ಪ್ರಕರಣ ಬಾಕಿ ಉಳಿದಿವೆ. 2024ರಲ್ಲಿ 478 ಪ್ರಕರಣಗಳ ಪೈಕಿ 217 ಪ್ರಕರಣಗಳು ಇತ್ಯರ್ಥಗೊಂಡಿವೆ. 261 ಪ್ರಕರಣ ಬಾಕಿ ಇವೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ 2023ರಲ್ಲಿ ಅತ್ಯಧಿಕ 44 ಪ್ರಕರಣಗಳು ದಾಖಲಾಗಿದ್ದು, 43 ಪ್ರಕರಣಗಳು ವಿಲೇವಾರಿ ಆಗಿವೆ. ನಂತರದ ಸ್ಥಾನದಲ್ಲಿ ಶಿವಮೊಗ್ಗ ಇದ್ದು, ಇಲ್ಲಿ 37 ಪ್ರಕರಣಗಳು ದಾಖಲಾಗಿ 5 ಪ್ರಕರಣ ಮಾತ್ರ ಇತ್ಯರ್ಥ ಆಗಿವೆ. ಮೂರನೇ ಸ್ಥಾನದಲ್ಲಿ ಹಾಸನ ಜಿಲ್ಲೆ ಇದ್ದು ಇಲ್ಲಿ 29 ಪ್ರಕರಣ ದಾಖಲಾಗಿದ್ದವು. ಎಲ್ಲ ಪ್ರಕರಣಗಳು ಇತ್ಯರ್ಥವಾಗಿವೆ.

ಇನ್ನು, 2024ರಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 50 ಪ್ರಕರಣಗಳು ದಾಖಲಾಗಿ 4 ಪ್ರಕರಣಗಳು ಮಾತ್ರ ಇತ್ಯರ್ಥಗೊಂಡಿವೆ. ಎರಡನೇ ಸ್ಥಾನದಲ್ಲಿ ಚಿಕ್ಕಮಗಳೂರು ಜಿಲ್ಲೆ ಇದ್ದು, ಇಲ್ಲಿ 49 ಪ್ರಕರಣ ದಾಖಲಾಗಿದ್ದವು. 24 ಪ್ರಕರಣ ಇತ್ಯರ್ಥವಾಗಿವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 39 ಪ್ರಕರಣ ದಾಖಲಾಗಿದ್ದು ಕೇವಲ 6 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ.

ರಾಜ್ಯದಲ್ಲಿವೆ 278 ಗೋಶಾಲೆಗಳು: ರಾಜ್ಯದಲ್ಲಿ ಒಟ್ಟು 278 ಗೋಶಾಲೆಗಳಿದ್ದು, ಅವುಗಳಲ್ಲಿ  30 ಸರ್ಕಾರಿ ಗೋಶಾಲೆಗಳು. 248 ಖಾಸಗಿಯದ್ದಾಗಿವೆ. ಈ ಎಲ್ಲವುಗಳಲ್ಲಿ ಒಟ್ಟಾರೆ 44,810 ಗೋವುಗಳು ಆಶ್ರಯಪಡೆದಿವೆ. ಇವುಗಳಿಗೆ ಸರ್ಕಾರ ನಿತ್ಯ ₹17.50 ಖರ್ಚು ಮಾಡುತ್ತಿದೆ. ಅದರಂತೆ ಈ ಸಾಲಿನಲ್ಲಿ ಅಗತ್ಯಕ್ಕನುಗುಣವಾಗಿ ಸರ್ಕಾರ ₹1.27 ಕೋಟಿ ಖರ್ಚು ಮಾಡಿರುವುದು ಗೊತ್ತಾಗಿದೆ.

ಬಳ್ಳಾರಿಯಲ್ಲಿಲ್ಲ ಗೋಶಾಲೆ:

ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸರ್ಕಾರದ ಒಂದೊಂದು ಗೋಶಾಲೆಗಳಿವೆ. ಆದರೆ, ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರ ಸರ್ಕಾರದ ಒಂದೇ ಒಂದು ಗೋಶಾಲೆಯೂ ಇಲ್ಲ. ಸ್ಥಾಪಿಸಲಾಗಿದ್ದ ಒಂದು ಗೋಶಾಲೆ ಜಿಲ್ಲೆ ವಿಭಜನೆಯಾದ ಬಳಿಕ ವಿಜಯನಗರ ಜಿಲ್ಲೆ ಪಾಲಾಗಿದೆ. ಸದ್ಯ ಬಳ್ಳಾರಿಯಲ್ಲಿ ಸರ್ಕಾರದ ಗೋಶಾಲೆ ಇಲ್ಲವಾಗಿದೆ. ಕಂಪ್ಲಿ ತಾಲೂಕಿನ 25.26 ಎಕರೆ ಪ್ರದೇಶದಲ್ಲಿ ಗೋಶಾಲೆ ತೆರೆಯಲು ಪ್ರಕ್ರಿಯೆ ನಡೆಯುತ್ತಿದೆ ಎನ್ನಲಾಗಿದೆ.

1,332 ಪಶು ವೈದ್ಯ ಹುದ್ದೆ ಖಾಲಿ

ರಾಜ್ಯದಲ್ಲಿ ಪಶುಗಳ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ, ಪಾಲಿ ಕ್ಲೀನಿಕ್‌, ಪಶು ಆಸ್ಪತ್ರೆ, ಪಶು ಚಿಕಿತ್ಸಾಲಯ, ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಸೇರಿದಂತೆ ಒಟ್ಟು 4,252 ಪಶು ವೈದ್ಯ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಎಲ್ಲ ಸಂಸ್ಥೆಗಳಲ್ಲಿ ಒಟ್ಟು 1,332 ಪಶುವೈದ್ಯರ ಹುದ್ದೆಗಳು ಖಾಲಿಯಾಗಿವೆ. ಮಂಜೂರಾದ ಒಟ್ಟು 3,110 ಪಶು ವೈದ್ಯರ ಹುದ್ದೆಯಲ್ಲಿ ಸದ್ಯ ಕೆಲಸ ಮಾಡುತ್ತಿರುವವರು 1,778 ಮಾತ್ರ.

ಪಶು ವೈದ್ಯರ ಕೊರತೆ ಇರುವುದು ಸತ್ಯ. ಇದು ರಾಜ್ಯದ ಪ್ರತಿ ಜಿಲ್ಲೆಗಳ ಸಮಸ್ಯೆ. ಆದರೆ, ‘ಮೈತ್ರಿ’ ತಂಡ ಮತ್ತು ‘ಪಶು ಸಖಿ’ಯರ ನೆರವಿನೊಂದಿಗೆ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ. ಪಶು ವೈದ್ಯರು ಇದ್ದರೆ ಹೆಚ್ಚಿನ ಅನುಕೂಲವಾಗಲಿದೆ. 
– ವಿನೋದ್‌ ಕುಮಾರ್‌, ಉಪ ನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ಬಳ್ಳಾರಿ 
ಬಳ್ಳಾರಿ ಮೂಲಕ ಆಂಧ್ರ, ತೆಲಂಗಾಣಕ್ಕೆ ನಿರಂತರವಾಗಿ ಆಕಳುಗಳನ್ನು ಸಾಗಿಸುತ್ತಿರುವುದನ್ನು ನಾವೇ ಪತ್ತೆ ಮಾಡಿದ್ದೇವೆ. ಹಲವು ಪ್ರಕರಣಗಳನ್ನು ನಾವೇ ಪೊಲೀಸ್‌ ಇಲಾಖೆಗೆ ತಿಳಿಸಿದ್ದೇವೆ. ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಬಿಗಿಯಾಗಬೇಕು. 
– ಶ್ರೀರಾಮ್‌, ಹಿಂದೂ ಜಾಗರಣ ವೇದಿಕೆ, ಉತ್ತರ ಪ್ರಾಂತ ಕಾರ್ಯಕಾರಣಿ ಸದಸ್ಯರು
ಗೋವುಗಳು ಅಕ್ರಮ ಸಾಗಣೆಯಂಥ ಪ್ರಕರಣಗಳ ವಿರುದ್ಧ ಪೊಲೀಸ್‌ ಇಲಾಖೆ ಕಟ್ಟುನಿಟ್ಟಾಗಿ ವರ್ತಿಸುತ್ತದೆ. ಅಕ್ರಮ ಸಾಗಣೆ ಕುರಿತ ಮಾಹಿತಿಗಳನ್ನು ನಿರ್ಲಕ್ಷಿಸಿದ ಉದಾಹರಣೆಯೇ ಇಲ್ಲ. ಸೂಕ್ತ ದಾಖಲೆಳಿಲ್ಲದಿದ್ದರೆ ಪ್ರಕರಣ ಖಚಿತ. 
ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.