ADVERTISEMENT

ಬಳ್ಳಾರಿ: ಮೂವರು ಬಾಣಂತಿಯರಿಗೆ ಇಲಿ ಜ್ವರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 16:09 IST
Last Updated 30 ನವೆಂಬರ್ 2024, 16:09 IST
   

ಬಳ್ಳಾರಿ: ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸಿಸೇರಿಯನ್‌ಗೆ ಒಳಗಾಗಿ, ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ (ವಿಮ್ಸ್‌) ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಮೂವರಿಗೆ ಇಲಿ ಜ್ವರ (ಲೆಪ್ಟೊಸ್ಪಿರೊಸಿಸ್) ಇದ್ದಿದ್ದು ಖಚಿತವಾಗಿದೆ.

‘ಬಾಣಂತಿಯರ ಪರೀಕ್ಷಾ ವರದಿಗಳು ಕೈಸೇರಿವೆ. ವಿಮ್ಸ್‌ಗೆ ದಾಖಲಾಗಿದ್ದ ಐವರು ಬಾಣಂತಿಯರ ಪೈಕಿ ಸುಮಲತಾ, ಮಹಾಲಕ್ಷ್ಮಿ ಮತ್ತು ಸುಮಯಾ ಎಂಬುವರಿಗೆ ಇಲಿ ಜ್ವರ ಇದ್ದಿದ್ದು ಖಚಿತವಾಗಿದೆ. ಸುಮಲತಾ ಮತ್ತು ಮಹಾಲಕ್ಷ್ಮಿ ಗುಣಮುಖರಾಗಿ, ಮನೆಗೆ ಮರಳಿದ್ದಾರೆ' ಎಂದು ವಿಮ್ಸ್‌ ನಿರ್ದೇಶಕ ಡಾ. ಗಂಗಾಧರ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಮಯಾ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರೆದಿದೆ. ಅವರ ಸ್ಥಿತಿ ಮೊದಲಿಗಿಂತಲೂ ಈಗ ಬಹಳಷ್ಟು ಸುಧಾರಿಸಿದೆ. ಅವರ ಮೂತ್ರಪಿಂಡದಲ್ಲಿ ಇನ್ನೂ ಸಮಸ್ಯೆ ಇದೆ’ ಎಂದು ಅವರು ತಿಳಿಸಿದರು.

ADVERTISEMENT

ಜಿಲ್ಲಾಸ್ಪತ್ರೆಯಲ್ಲಿ ನವೆಂಬರ್ 9 ರಿಂದ 11ರ ನಡುವಿನ ಅವಧಿಯಲ್ಲಿ ಸಿಸೇರಿಯನ್‌ಗೆ ಒಳಗಾಗಿದ್ದ 7 ಮಹಿಳೆಯರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇವರಲ್ಲಿ ಇಬ್ಬರು ಜಿಲ್ಲಾಸ್ಪತ್ರೆಯಲ್ಲೇ ಮೃತಪಟ್ಟಿದ್ದರು. ಹೀಗಾಗಿ ಉಳಿದ ಐವರನ್ನು ವಿಮ್ಸ್‌ಗೆ ದಾಖಲಿಸಲಾಗಿತ್ತು. ಅಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದರು. 

ಇಂದು ಆರ್.ಅಶೋಕ ಭೇಟಿ: ಬಾಣಂತಿಯರ ಸಾವಿನ ಹಿನ್ನೆಲೆಯಲ್ಲಿ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್. ಅಶೋಕ ಭಾನುವಾರ ವಿಮ್ಸ್‌ಗೆ ಭೇಟಿ ನೀಡುವರು. ಮಧ್ಯಾಹ್ನ 12 ರಿಂದ 1ಗಂಟೆ ಅವಧಿಯಲ್ಲಿ ವಿಮ್ಸ್‌ಗೆ ಭೇಟಿ ನೀಡಿ, ವೈದ್ಯರು ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.