ADVERTISEMENT

ಹಂಪಿಯಲ್ಲಿ ಇಂದು ತುಂಗಾ ಆರತಿ

ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಯಿಂದ ಸಿದ್ಧತೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 15:23 IST
Last Updated 3 ಜನವರಿ 2020, 15:23 IST
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿಗೆ ಸಿದ್ಧತೆ ಮಾಡಿಕೊಂಡಿರುವುದು
ಹಂಪಿಯ ತುಂಗಭದ್ರಾ ನದಿ ತಟದಲ್ಲಿ ತುಂಗಾ ಆರತಿಗೆ ಸಿದ್ಧತೆ ಮಾಡಿಕೊಂಡಿರುವುದು   

ಹೊಸಪೇಟೆ: ‘ಹಂಪಿ ಉತ್ಸವ’ದ ಪ್ರಯುಕ್ತ ಶನಿವಾರ (ಜ.4) ಸಂಜೆ 5.30ಕ್ಕೆ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನದ ಮಗ್ಗುಲಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಆರತಿ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ನದಿಯಲ್ಲಿನ ಬಂಡೆಗಳಿಗೆ ಸುಣ್ಣ ಬಳಿದು, ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ಆರತಿ ಕಾರ್ಯಕ್ರಮಕ್ಕೆ ತಾತ್ಕಾಲಿಕವಾಗಿ ವೇದಿಕೆ ನಿರ್ಮಿಸಲಾಗಿದೆ.

ವಿದ್ಯಾರಣ್ಯ ಭಾರತಿ ಸ್ವಾಮೀಜಿ ಅವರು ಪೂಜಾ ಕಾರ್ಯಕ್ರಮ ನಡೆಸಿಕೊಡುವರು. ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಾಗಿನ ಸಮರ್ಪಿಸುವರು. ಶಾಸಕ ಆನಂದ್‌ ಸಿಂಗ್‌, ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಸೇರಿದಂತೆ ಹಲವರು ಪಾಲ್ಗೊಳ್ಳುವರು.

ADVERTISEMENT

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸಾರಿಗೆ ಸಂಸ್ಥೆಯು ನಗರದಿಂದ ಹಂಪಿಗೆ ಬಸ್‌ ವ್ಯವಸ್ಥೆ ಕಲ್ಪಿಸಿದೆ. ದೇಶದ ಸುಭಿಕ್ಷೆಗಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೂ ಮುನ್ನ ಭುವನೇಶ್ವರಿಯ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ. ನದಿ ತಟದಲ್ಲಿ ಸಾಲಾಗಿ ದೀಪಗಳ ಅಲಂಕಾರ ಮಾಡಲಾಗುತ್ತದೆ. ಕೊನೆಯಲ್ಲಿ ಸಿಡಿಮದ್ದು ಸುಡುವ ಕಾರ್ಯಕ್ರಮ ಜರುಗುತ್ತದೆ.

ಸಿದ್ಧತಾ ಸಭೆ:

ಜ. 10, 11ರಂದು ನಡೆಯಲಿರುವ ಉತ್ಸವದ ಸಿದ್ಧತೆ ಕುರಿತು ಲಕ್ಷ್ಮಣ ಸವದಿ ಅವರು ಶನಿವಾರ ಸಂಜೆ 4ಕ್ಕೆ ತಾಲ್ಲೂಕಿನ ಕಮಲಾಪುರದಲ್ಲಿ ಸಭೆ ನಡೆಸುವರು.

ಸಿದ್ಧತೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ ಎನ್ನುವುದನ್ನು ವಿವಿಧ ಸಮಿತಿಗಳ ಅಧ್ಯಕ್ಷರಿಂದ ಮಾಹಿತಿ ಪಡೆಯುವರು. ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವರು.

ಛಾಯಾಚಿತ್ರ ಸ್ಪರ್ಧೆ ಅವಧಿ ವಿಸ್ತರಣೆ:

ಉತ್ಸವದ ಪ್ರಯುಕ್ತ ಛಾಯಾಚಿತ್ರ ಸ್ಪರ್ಧೆ ಹಮ್ಮಿಕೊಂಡಿದ್ದು, ಆಸಕ್ತ ಛಾಯಾಗ್ರಾಹಕರು ಅರ್ಜಿ ಸಲ್ಲಿಸಲು ಜ. 8ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಜ. 5 ಕೊನೆಯ ದಿನವಾಗಿತ್ತು.

ಹಂಪಿಯ ಸ್ಮಾರಕಗಳು, ಪ್ರಾಕೃತಿಕ ಚಿತ್ರಣ, ಗ್ರಾಮೀಣ ಬದುಕು, ವನ್ಯಜೀವಿ, ಹಂಪಿಯ ಸಾಂಸ್ಕೃತಿಕ ಪರಂಪರೆ, ಜೀವಜಾಲಕ್ಕೆ ಸಂಬಂಧಿಸಿದ ಛಾಯಾಚಿತ್ರ ಕಳುಹಿಸಬಹುದು.ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 08392-273465, 7019495512, 9449624548 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.