ADVERTISEMENT

ಕಚ್ಚಿದ ನಾಗರಹಾವನ್ನು ಹಿಡಿದು ಬೈಕ್‍ನಲ್ಲಿ ಸಂಚಾರ; ಬೆರಗು ಮೂಡಿಸಿದ ಯುವಕ...!

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 15:42 IST
Last Updated 13 ಜೂನ್ 2021, 15:42 IST
ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡಿರುವ ಯುವಕ
ನಾಗರಹಾವನ್ನು ಕೈಯಲ್ಲಿ ಹಿಡಿದುಕೊಂಡಿರುವ ಯುವಕ   

ಕಂಪ್ಲಿ: ಯುವಕನೊಬ್ಬ ತನಗೆ ಕಚ್ಚಿದ ನಾಗರಹಾವನ್ನು ಕೈಯಲ್ಲಿ ಹಿಡಿದು 13 ಕಿ.ಮೀ ಬೈಕ್‍ನಲ್ಲಿ ಚಿಕಿತ್ಸೆಗೆ ಕ್ರಮಿಸಿ ದಾರಿಯುದ್ದಕ್ಕೂ ಅಚ್ಚರಿ ಮೂಡಿಸಿರುವುದು ಶನಿವಾರ ಸಂಜೆ ನಡೆದಿದೆ.

ತಾಲ್ಲೂಕಿನ ಉಪ್ಪಾರಹಳ್ಳಿ ಗ್ರಾಮದ ವಾಲ್ಮೀಕಿ ಕಾಡಪ್ಪ(25) ಅವರಿಗೆ ನಾಗರಹಾವು ಕಚ್ಚಿದ ನಂತರ ಮತ್ತೊಬ್ಬರ ನೆರವು ಪಡೆದು ಬೈಕ್ ಮೂಲಕ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪ್ರಥಮ ಚಿಕಿತ್ಸೆ ಪಡೆದಿದ್ದಾನೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ವಿಮ್ಸ್‌ಗೆ ದಾಖಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಘಟನೆ ವಿವರ: ಕಾಡಪ್ಪ ಅವರ ಅತ್ತೆ ನಾಗಮ್ಮ ಅವರಿಗೆ ಸೇರಿದ ಕೋಳಿ ಫಾರಂ ಬಳಿ ಒಂದು ವಾರದಿಂದ ನಾಗರಹಾವು ತುಂಬಾ ಉಪಟಳ ನೀಡಿತ್ತು. ಅದನ್ನು ಸೆರೆ ಹಿಡಿಯುವ ಭರದಲ್ಲಿದ್ದಾಗ ನಾಗರಹಾವು ಆಕಸ್ಮಿಕವಾಗಿ ಕಾಡಪ್ಪ ಅವರ ಎಡ ಮುಂಗೈಗೆ ಕಚ್ಚಿದೆ. ಅದರಿಂದ ಆಕ್ರೋಶಗೊಂಡು ನಾಗರಹಾವನ್ನು ಕೈಯಲ್ಲಿ ಸೆರೆ ಹಿಡಿದು ಗ್ರಾಮಕ್ಕೆ ಬಂದಿದ್ದಾನೆ. ಭೀತಿಗೊಂಡ ಗ್ರಾಮಸ್ಥರು ಹಾವು ಬಿಟ್ಟು ಮೊದಲು ಆಸ್ಪತ್ರೆಗೆ ತೆರಳುವಂತೆ ಮನವಿ ಮಾಡಿದ್ದಾರೆ. ಜನರ ವಿನಂತಿ ಮನ್ನಿಸದೆ ಹಾವಿನೊಂದಿಗೆ ಬೈಕ್‍ನಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದಾನೆ.

ADVERTISEMENT

ಆಸ್ಪತ್ರೆ ಆವರಣದಲ್ಲಿ ನಾಗರಹಾವಿನೊಂದಿಗೆ ಯುವಕನನ್ನು ಕಂಡ ಜನರು, ರೋಗಿ, ವೈದ್ಯರು, ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ. ಮೊದಲು ಹಾವು ಬಿಟ್ಟು ಬಂದರೆ ಚಿಕಿತ್ಸೆ ನೀಡುವುದಾಗಿ ಸೂಚಿಸಿದ್ದಾರೆ. ನಂತರ ನಾಗರಹಾವನ್ನು ಆಸ್ಪತ್ರೆ ಆವರಣದಲ್ಲಿ ಬಿಟ್ಟು ಬಂದು ಪ್ರಥಮ ಚಿಕಿತ್ಸೆ ಪಡೆದಿದ್ದಾನೆ.

ನಾಗರಹಾವನ್ನು ಆವರಣದಲ್ಲಿ ಬಿಟ್ಟಿದ್ದರಿಂದ ಭಯಗೊಂಡ ಸ್ಥಳದಲ್ಲಿದ್ದ ಜನರು ಅದನ್ನು ಸಾಯಿಸಿದ್ದಾರೆ.ಯುವಕ ನಾಗರಹಾವು ಸೆರೆ ಹಿಡಿದು ಬೈಕ್‍ನಲ್ಲಿ ಸಂಚರಿಸಿದ ವಿಡಿಯೊ ಭಾನುವಾರ ವೈರಲ್ ಆಗಿದ್ದು, ವಿಸ್ಮಯ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.