ADVERTISEMENT

ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆ. 5ರಿಂದ ಬಸ್ ಸಂಚಾರ ಬಂದ್; ಆದಿಮೂರ್ತಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 6:34 IST
Last Updated 3 ಆಗಸ್ಟ್ 2025, 6:34 IST
ಕೆ. ಆದಿಮೂರ್ತಿ 
ಕೆ. ಆದಿಮೂರ್ತಿ    

ಬಳ್ಳಾರಿ: ‘ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡದ ಸರ್ಕಾರದ ನಿಲುವು ಖಂಡಿಸಿ ಇದೇ 5ರಿಂದ  ರಾಜ್ಯದಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ’ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ ಆದಿಮೂರ್ತಿ ತಿಳಿಸಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಸರ್ಕಾರ ನಮಗೆ ಪರಿಹಾರ ಒದಗಿಸದೇ ಹೋದರೆ 5ರಿಂದ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ’ ಎಂದು ಎಚ್ಚರಿಸಿದರು. 

‘ರಾಜ್ಯ ಸರ್ಕಾರ ಸಾರಿಗೆ ನೌಕರರ ಬಗೆಗೆ ತಾತ್ಸಾರ ಮನೋಭಾವ ಹೊಂದಿದೆ.  2020ರಲ್ಲಿ ಅಂಗೀಕರವಾದ ಸಾರಿಗೆ ನೌಕರರ ವೇತನ ಪರಿಷ್ಕರಣೆ ಒಪ್ಪಂದವನ್ನು ಜಾರಿ ಮಾಡುವುದಿಲ್ಲ, ಹಿಂಬಾಕಿ ನೀಡುವುದಿಲ್ಲ ಎಂದು ಮುಖ್ಯ ಮಂತ್ರಿಯೇ ಜುಲೈ 4ರ ಸಮಾಲೋಚನಾ ಸಭೆಯಲ್ಲಿ  ಉಡಾಫೆಯಿಂದ ಮಾತನಾಡಿ ದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‘2027ರವರೆಗೆ ವೇತನ ಪರಿಷ್ಕರಣೆ ಮಾಡುವುದಿಲ್ಲ ಎಂದು ಸರ್ಕಾರ ಹೇಳಿದೆ. ಹೀಗಾಗಿ ಜುಲೈ 15ರಂದು ರಾಜ್ಯ ಸರ್ಕಾರಕ್ಕೆ ಮುಷ್ಕರದ ನೋಟಿಸ್‌ ನೀಡಲಾಗಿದೆ. ಅದರಂತೆ ಆಗಸ್ಟ್ 5ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ’ ಎಂದರು. 

‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರು ಎಸ್ಮಾ ಕಾಯ್ದೆ ಜಾರಿಗೆ ಮುಂದಾಗಿದ್ದರು. ಆಗ ಇದೇ ಸಿದ್ದರಾಮಯ್ಯ ಅವರು ವಿರೋಧಿಸಿದ್ದರು. ಆದರೆ, ಇಂದು ತಾವೇ ಅಧಿಕಾರದಲ್ಲಿದ್ದಾಗ್ಯೂ ಕಾರ್ಮಿಕರ ಹಿತ ಕಾಯುವ ಬದಲು ಎಸ್ಮಾ ಜಾರಿಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದರು. 

‘ಈ ಬಾರಿಯ ಮುಷ್ಕರನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ.  ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಯಾದರೆ ಅದಕ್ಕೆ ಸಾರಿಗೆ ನೌಕರರು ಹೊಣೆಯಲ್ಲ. ಮುಖ್ಯಮಂತ್ರಿಗಳೇ ಹೊಣೆಯಾಗಲಿ ದ್ದಾರೆ. ವೇತನ ಪರಿಷ್ಕರಣೆಗೆ 18 ತಿಂಗಳು ಕಾದಿದ್ದೇವೆ. ಇನ್ನು ವಿಳಂಬ ಮಾಡಲು ಸಾಧ್ಯವಿಲ್ಲ’ ಎಂದರು. 

‘ಖಾಸಗಿಯವರ ನೆರವು ಪಡೆಯಲು ಸರ್ಕಾರ ಚಿಂತಿಸುತ್ತಿದೆ. ಆದರೆ ಖಾಸಗಿಯವರು ಕೆಎಸ್‌ಆರ್‌ಟಿಸಿ ಪರ್ಮಿಟ್‌ ಕೊಡಲು ಒತ್ತಾಯಿಸುತ್ತಿದ್ದಾರೆ. ಪರ್ಮಿಟ್‌ ಎಂಬುದು ಸರ್ಕಾರದ ಆಸ್ತಿ. ಅದನ್ನು ಮಾರಿಕೊಳ್ಳಲು ಸರ್ಕಾರ ಸಿದ್ಧವಿದೆಯೇ? 23 ಸಾವಿರ ಬಸ್‌ಗಳನ್ನು ಖಾಸಗಿಯವರಿಂದ ಪಡೆಯಲು ಸಾಧ್ಯವೇ? ಎಂದು ಪ್ರಶ್ನೆ ಮಾಡಿದರು. 

ಜಂಟಿ ಕ್ರಿಯಾ ಸಮಿತಿಯ ಮುಖಂಡರಾದ ಬಿ.ಹನುಮಂತಪ್ಪ, ಬಿ.ಬಸವರಾಜ್, ಆರ್‌.ಶಿವಪ್ಪ, ಚನ್ನಪ್ಪ, ಶರಣಪ್ಪ, ಡಿ.ಗಾದಿಲಿಂಗಪ್ಪ, ಡಿ.ಶಿವಮೂರ್ತಿ, ಶಫೀ ಇದ್ದರು. 

ಈ ಬಾರಿಯ ಮುಷ್ಕರನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವುದಿಲ್ಲ. ಮುಷ್ಕರದಿಂದ ಸಾರ್ವಜನಿಕರಿಗೆ ಸಮಸ್ಯೆಯಾದರೆ ಅದಕ್ಕೆ ಸಾರಿಗೆ ನೌಕರರು ಹೊಣೆಯಲ್ಲ
ಕೆ.ಎ ಆದಿಮೂರ್ತಿ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ

‘ನಮ್ಮಿಂದಲೇ ‘ಶಕ್ತಿ’ ಸಾಕಾರ’:

ರಾಜ್ಯ ಸರ್ಕಾರದ ‘ಶಕ್ತಿ’ ಯೋಜನೆ ಯಶಸ್ವಿಯಾಗಲು ಸಾರಿಗೆ ನೌಕರರ ಶ್ರಮವೇ ಕಾರಣ.ಶಕ್ತಿ ಯೋಜನೆ ಜಾರಿಗೆ ವಾಹನ ಚಾಲಕರು ಹಾಗೂ ನಿರ್ವಾಹಕರು ವಿಶ್ರಾಂತಿಯಿಲ್ಲದೆದುಡಿದಿದ್ದಾರೆ. ಇಷ್ಟಾಗಿಯೂ ಈ ಸರ್ಕಾರಕ್ಕೆ ಸಾರಿಗೆ ನೌಕರರ ಮೇಲೆ ಯಾವುದೇಕರುಣೆಯಿಲ್ಲ. ಶಕ್ತಿಯೋಜನೆಯ ₹3500 ಕೋಟಿಯನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ. ಆ ಹಣ ನೀಡಿದರೂ ನೌಕರರ ಸಮಸ್ಯೆಗಳು ನಿವಾರಣೆಯಾಗುತ್ತವೆ’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ.ಆದಿಮೂರ್ತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.